ವಾಟರ್ ಟ್ಯಾಂಕರ್ ಹಾಯ್ದು ಬಾಲಕಿ ಸಾವು
ಪಾವಗಡ: ಕುಡಿಯುವ ನೀರಿನ ವಾಟರ್ ಟ್ಯಾಂಕ್ ಹರಿದು ಬಾಲಕಿ ಮೃತಪಟ್ಟ ಘಟನೆ ಸೋಮವಾರ ಪಟ್ಟಣದ ಶ್ರೀ ವೆಂಕಟೇಶ್ವರ ವಿದ್ಯಾ ಸಂಸ್ಥೆ ಬಳಿ ನಡೆದಿದೆ.
ಮೃತಪಟ್ಟ ದುರ್ದೈವಿ ಪಟ್ಟಣದ ವಾಸಿ ಸುಪೀಯಾ (15). ಪಟ್ಟಣದ ಶಿರಾ ರಸ್ತೆಯ ವಾಸಿ ಸಬ್ಬೀರ್ ಎಂಬುವರ ಪುತ್ರಿ ಸುಪೀಯಾ ಎಸ್ಎಂಬಿಆರ್ ವಿದ್ಯಾ ಸಂಸ್ಥೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಎಸ್ಎಸ್ಎಲ್ಸಿ ಪರೀಕ್ಷೆ ಇರುವ ಕಾರಣ ಡ್ರಾಪ್ ಕೊಡುವ ಸಲುವಾಗಿ ತನ್ನ ಸಹೋದರಿಯನ್ನು ಟಿವಿಎಸ್ನಲ್ಲಿ ಕೂರಿಸಿಕೊಂಡು ಪರೀಕ್ಷೆ ಕೇಂದ್ರದ ಬಳಿ ತೆರಳಿದ್ದಾಳೆ. ಪರೀಕ್ಷೆ ಕೇಂದ್ರದ ಬಳಿ ತನ್ನ ಸಹೋದರಿಯನ್ನು ಬಿಟ್ಟು ವಾಪಸ್ ಬರುವಾಗ ಎದುರಿಗೆ ಬರುತ್ತಿದ್ದ ಪಟ್ಟಣದ ಶ್ರೀ ಮಾರುತಿ ಬೆಸ್ಟ್ ವಾಟರ್ ಟ್ಯಾಂಕ್ ಆಕೆ ಟಿವಿಎಸ್ಗೆ ಗುದ್ದಿದ ಪರಿಣಾಮ ಬಾಲಕಿ ನೆಲಕ್ಕೆ ಬಿದ್ದ ಸ್ಥಳದಲ್ಲಿಯೇ ಪ್ರಜ್ಞಾಹೀನಳಾಗಿದ್ದಾಳೆ. ಘಟನೆಯನ್ನು ಕಂಡ ಸಾರ್ವಜನಿಕರು ಕೂಡಲೇ ತುರ್ತು ವಾಹನಕ್ಕೆ ಕರೆ ಮಾಡಿ ತೀವ್ರ ಅಸ್ವಸ್ಥಳಾಗಿ ಬಿದ್ದ ಆಕೆಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸ್ಥಳಕ್ಕೆ ಸಿಪಿಐ ಭಾನುಪ್ರಕಾಶ್ ಮತ್ತು ಕ್ರೈಂ ಪಿಎಸ್ಐ ನಟರಾಜ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಾಟರ್ ಟ್ಯಾಂಕ್ ಚಾಲಕ ಪರಾರಿಯಾಗಿರುವುದಾಗಿ ತಿಳಿದಿದ್ದು ಸ್ಥಳಕ್ಕೆ ಗಣ್ಯರು ಮತ್ತು ಸಾರ್ವಜನಿಕರು ಭೇಟಿ ನೀಡಿದರು.