ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಾಡಹಗಲೇ ಚಿರತೆ ದಾಳಿ: ಇಬ್ಬರಿಗೆ ಗಾಯ

Rashmi Kasaragodu
Updated On : 8 Apr 2014, 10:36 am

ತುರುವೇಕೆರೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಅಮಾನಿಕೆರೆ ಮಲ್ಲಾಘಟ್ಟದ ಜಮೀನಿನ ಬಳಿ ಚಿರತೆಯೊಂದು ರೈತರಿಬ್ಬರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಈರ್ವರಿಗೆ ತೀವ್ರವಾದ ಗಾಯವಾಗಿರುವ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ಗ್ರಾಮದ ನಾಗೇಶ್ ಎಂಬುವವರು ಜಮೀನಿನ ಬಳಿ ತೆರಳಿದ್ದ ವೇಳೆ ಪೊದೆಯೊಳಗೆ ಅಡಗಿ ಕುಳಿತಿದ್ದ ಚಿರತೆ ದಾಳಿ ಮಾಡಿದೆ. ದಾಳಿಗೆ  ಒಳಗಾದ ನಾಗೇಶ್‌ರ ಕೈ ಮತ್ತು ಬೆನ್ನಿಗೆ ಕಚ್ಚಿ ಗಾಯಗೊಳಿಸಿದೆ. ದಾಳಿ ಮಾಡಿದ ವೇಳೆ ಅಕ್ಕ ಪಕ್ಕದ ಜನರ ಕಿರಿಚಾಟಕ್ಕೆ ಚಿರತೆ ಪುನಃ ಪೊದೆಯೊಳಗೆ ಹೋಯಿತು. ಗ್ರಾಮದೊಳಗೆ ವಿಷಯ ಹರಡಿದ ವೇಳೆ ಗೋಪಾಲಯ್ಯ ಎಂಬುವವರೂ ಚಿರತೆಯನ್ನು ನೋಡಲು ಹಾಗೂ ಹುಡುಕಲು ಮಚ್ಚಿನ ಸಹಿತ ಪೊದೆಯ ಕಡೆ ಆಗಮಿಸಿದ್ದಾರೆ. ಪೊದೆಯೊಳಗೆ ಅಡಗಿ ಕುಳಿತಿದ್ದ ಚಿರತೆ ಗೋಪಾಲಯ್ಯನ ಮೇಲೂ ದಾಳಿ ಮಾಡಿದೆ. ಕುತ್ತಿಗೆ, ಕೈ ಹಾಗೂ ಬೆನ್ನಿಗೆ ಬಲವಾಗಿ ಕಚ್ಚಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಇಬ್ಬರನ್ನೂ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ದಿವಾಕರ್ ಪತ್ರಿಕೆಗೆ ತಿಳಿಸಿದರು.
ಗ್ರಾಮಸ್ಥರಲ್ಲಿ ಆತಂಕ: ನಿನ್ನೆಯಷ್ಟೇ ತಾಲೂಕಿನ ಮಾಯಸಂದ್ರ ಹೋಬಳಿಯ ಅಜ್ಜನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ 8 ಕುರಿಗಳು ಬಲಿಯಾಗಿದ್ದವು. ಈಗ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಲ್ಲಾಘಟ್ಟ ಕೆರೆಯ ಬಳಿ ಚಿರತೆ ಹಾಡುಹಗಲೇ ದಾಳಿ ಮಾಡಿರುವುದು ಜನಸಾಮಾನ್ಯರಿಗೆ ಹಾಗೂ ಕುರಿಗಾಹಿಗಳಿಗೆ ಆತಂಕ ತರಿಸಿದೆ. ಕೆರೆಯ ಬಳಿಯೇ ಸಾವಿರಾರು ಜಾನುವಾರುಗಳನ್ನು ಮೇಯಿಸುವ ಕುರಿಗಾಹಿಗಳಲ್ಲಿ ಆತಂಕ ಮನೆ ಮಾಡಿದೆ. ಮಲ್ಲಾಘಟ್ಟ ಕೆರೆಯ ರುದ್ರರಮಣೀಯ ದೃಶ್ಯ ವೀಕ್ಷಿಸಲೂ ಸಹ ಪ್ರತಿದಿನ ನೂರಾರು ಮಂದಿ ಆಗಮಿಸುವರು. ಚಿರತೆ ಗ್ರಾಮದ ಪೊದೆಯಲ್ಲೇ ಅಡಗಿ ಕುಳಿತಿದೆ. ಅರಣ್ಯ ಇಲಾಖಾ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಹ ನಿರ್ಲಿಪ್ತ ಮನೋಭಾವವನ್ನು ತಾಳಿದ್ದಾರೆ ಎಂದು ಆನೇಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ಗಾಯಾಳುಗಳನ್ನು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್ ಭೇಟಿ ಮಾಡಿ ಸಾಂತ್ವನ ಹೇಳಿದರು. ತಾಲೂಕಿನಲ್ಲಿ ಚಿರತೆಯ ಕಾಟ ಅತಿಯಾಗಿದ್ದು ಜನರು ಬಹಳ ಭಯದ ವಾತಾವರಣದಲ್ಲಿದ್ದಾರೆ. ಕೂಡಲೇ ಅರಣ್ಯ ಇಲಾಖಾ ಸಿಬ್ಬಂದಿ ಚಿರತೆಯನ್ನು ಹಿಡಿಯುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement