ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಸ್‌ಬಿಎಂ ಗ್ರಾಹಕನ ಪ್ರಾಮಾಣಿಕತೆ

Vishwanath S
Updated On : 22 Apr 2014, 1:01 am

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿರುವ ಎಸ್‌ಬಿಎಂ ಶಾಖೆಯಲ್ಲಿ ಗ್ರಾಹಕರೊಬ್ಬರು ಎಟಿಎಮ್‌ನಲ್ಲಿ ಹಣ ತೆಗೆಯಲು ಹೋದಾಗ ಎಟಿಎಮ್ ಬೂತ್ ನಲ್ಲಿ ಹಣವಿದ್ದುದನ್ನು ಕಂಡ ಗ್ರಾಹಕರೊಬ್ಬರು ಸದರಿ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಸಂಗ ಜರುಗಿದೆ.
ಪಟ್ಟಣದ ವಾಸಿಯಾದ ಎಸ್.ಹೇಮಂತ್ ಕುಮಾರ್ ಎಂಬುವರು ಎಟಿಎಂನಲ್ಲಿ ಹಣ ಡ್ರಾಮಾಡಲು ಬೆಳಿಗ್ಗೆ 7.15 ಕ್ಕೆ ಹೋದಾಗ ಈ ಎಟಿಎಮ್‌ನಲ್ಲಿ ವಾರಸುದಾರರಿಲ್ಲದೆ 7600 ರು.ಗಳನ್ನು ಬ್ಯಾಂಕ್ ವ್ಯವಸ್ಥಾಪಕರಾದ ಹೆಚ್.ಡಿ.ಶಂಕರ್ ಅವರಿಗೆ ಹಿಂತಿರುಗಿಸಿದ್ದಾರೆ.
ಡಿಕ್ಕಿ: ಸ್ಥಳದಲ್ಲೇ ಲಾರಿ ಕ್ಲೀನರ್ ಸಾವು
ಶಿರಾ ರಾ.ಹೆ. ಸಮೀಪದ ಸರ್ವೀಸ್ ರಸ್ತೆಯ ಡಿವೇಡರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲಿಯೇ ಮತಪಟ್ಟ ಘಟನೆ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿಗೆ ಮರಳನ್ನು ತುಂಬಿಕೊಂಡು ಹೋಗಲು ಶಿರಾ ಬಳಿಯ ಹೇರೂರಿಗೆ ಲಾರಿಯೊಂದು ಬರುತ್ತಿದ್ದಾಗ ಕಳ್ಳಂಬೆಳ್ಳ-ಚಿಕ್ಕನಹಳ್ಳಿ ಮಧ್ಯೆ ಲಾರಿ ಚಾಲಕ ತನ್ನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ರವಿ (25) ಎಂಬಾತ ಮೃತಪಟ್ಟಿದ್ದಾನೆ.
ಮೃತ ರವಿ ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ಪಳಾರ ಗ್ರಾಮದವನಾಗಿದ್ದು, ಕಳೆದ 3 ವರ್ಷದ ಹಿಂದೆ ವಿವಾಹವಾಗಿದ್ದ. ಈತನಿಗೆ 2 ವರ್ಷದ ಒಂದು ಮಗು ಇದ್ದು ಈತನ ಹೆಂಡತಿ ಕೆಲವು ತಿಂಗಳ ಹಿಂದೆ
ಮೃತಪಟ್ಟಿದ್ದಳು ಎನ್ನಲಾಗಿದೆ. ರವಿಯು ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನುವ ಸುದ್ದಿ ತಿಳಿದೊಡನೆ ಪಳಾರ ಗ್ರಾಮದ ಅನೇಕ ಮುಖಂಡರು ಹಾಗೂ ಆತನ ಸಂಬಂಧಿಗಳು ಲಾರಿ ಮಾಲೀಕ ಏನಾದರೂ ಪರಿಹಾರ ನೀಡಲಿ ಎಂದು ಒತ್ತಾಯಿಸಿ ಶಿರಾ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಶಿರಾ: ತಾಲೂಕಿನ ಚಿಕ್ಕಸಂದ್ರ ಕಾವಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಚಿಕ್ಕಸಂದ್ರ ಕಾವಲ್ ಅರಣ್ಯ ಪ್ರದೇಶದ ಮರವೊಂದಕ್ಕೆ ಸೀರೆಯೊಂದರಿಂದ ನೇಣು ಹಾಕಿಕೊಂಡು ಸುಮಾರು 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲು ಮುಖ ಸಾಧಾರಣ ಶರೀರ ಮೈಮೇಲೆ ಕೆಂಪು, ನೀಲಿ, ಬಿಳಿ ಮಿಶ್ರಿತ ಚೌಕಳಿ ಅಂಗಿಯನ್ನು ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಕೂಡಲೇ ಆರಕ್ಷಕ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. ದೂರವಾಣಿ 08135275184, 08135275237.
ಅಪರಿಚಿತ ವ್ಯಕ್ತಿ ಶವ ಪತ್ತೆ
ತಿಪಟೂರು: ತಿಪಟೂರು-ಹೊನ್ನವಳ್ಳಿ ರೈಲು ನಿಲ್ದಾಣದ ಬಳಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈತ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.  ಮೃತಪಟ್ಟಿರುವ ವ್ಯಕ್ತಿ ಸುಮಾರು 36 ವರ್ಷದವ.  5ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ, ಕುರುಚಲು ಗಡ್ಡ, ಕತ್ತಿನಲ್ಲಿ ಕಪ್ಪು ದಾರ, ಕೆಂಪು ಕಪ್ಪು ಹಳದಿ ಬಿಳಿ ಗೆರೆ ಇರುವ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
 ಈ ಪ್ರಕರಣ ಅರಸೀಕೆರೆ ರೇಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮೃತನ ರಕ್ತಸಂಬಂಧಿಗಳೇನಾದರೂ ಇದ್ದಲ್ಲಿ ಅರಸೀಕೆರೆ ರೇಲ್ವೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕೆಂದು ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.
ವಿಶ್ವ ಭೂ ದಿನಾಚರಣೆ ಇಂದು
ತುಮಕೂರು: ಸಿಜ್ಞಾ ಯುವ ಸಂವಾದ ಕೇಂದ್ರದ ವತಿಯಿಂದ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ವಿಶ್ವ ಭೂ ದಿನಾಚರಣೆ ಅಂಗವಾಗಿ ಹಸಿರು ನಗರಗಳು ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಏ. 22 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಪರಿಸರವಾದಿ ಸಿ. ಯತಿರಾಜು  ಉದ್ಘಾಟಿಸಲಿದ್ದಾರೆ. ಕೃಷಿ ಚಿಂತಕ ವಿಶ್ವನಾಥ್ ಆಣೆಕಟ್ಟೆ, ಜ್ಞಾನಸಿಂಧುಸ್ವಾಮಿ, ಸಂವಾದ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯೋದಯ ಕಾನೂನು ಕಾಲೇಜಿನ ಪ್ರಿನ್ಸಿಪಾಲ್ ವೆಂಕಟಾಚಲಪತಿ ಸ್ವಾಮಿ ವಹಿಸಲಿದ್ದಾರೆ. ಆಸಕ್ತ ಯುವಜನತೆ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 944768426, 9743666781 ಸಂಪರ್ಕಿಸುವಂತೆ ಕೋರಲಾಗಿದೆ.
ಚೇಳೂರು ನಿಧನಕ್ಕೆ ಸಂತಾಪ: ಪ್ರಗತಿಪರ ಚಿಂತಕ, ಹೋರಾಟಗಾರ, ಲೇಖಕ ಚೇಳೂರು ವೆಂಕಟೇಶ್ ಅವರ ಅಕಾಲಿಕ ಮರಣಕ್ಕೆ ಜಿಲ್ಲಾ ಛಲವಾದಿ ಮಹಾಸಭಾ ಸಂತಾಪ ವ್ಯಕ್ತಪಡಿಸಿದೆ.
ಈ ಕುರಿತು ಶ್ರದ್ಧಾಂಜಲಿ ಸಭೆ ನಡೆಸಿ, ಹೇಳಿಕೆ ನೀಡಿರುವ ಛಲವಾದಿ ಮಹಾಸಬಾ, ದಲಿತ ಸಂಘಟನೆಗೆ, ಸಮುದಾಯಕ್ಕೆ ಹೊಸ ಆಯಾಮ ನೀಡುತ್ತಿದ್ದ ವ್ಯಕ್ತಿ ಚೇಳೂರು ವೆಂಕಟೇಶ್. ಅಷ್ಟೇ ಅಲ್ಲ ದಲಿತ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿದ್ದ ವ್ಯಕ್ತಿ. ಒಬ್ಬ ಶಾಲಾ ಶಿಕ್ಷಕನಾಗಿ, ದಲಿತ ಸಮುದಾಯದ ಸಮದ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ವ್ಯಕ್ತಿ. ಡಿಎಸ್‌ಎಸ್, ದಲಿತ ಸಾಹಿತ್ಯ ಪರಿಷತ್, ಅಲೆಮಾರಿ ಬುಡಕಟ್ಟು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ ಗೆಳೆಯನ ಮರಣ ಇಡೀ ದಲಿತ ಸಮುದಾಯಕ್ಕಷ್ಟೇ ಅಲ್ಲ, ಪ್ರಗತಿಪರ ಸಮುದಾಯಕ್ಕೆ ತುಂಬಲಾರದ ನಷ್ಟವುಂಟುಮಾಡಿದೆ.
ಸಭೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಬಿ. ಶಾಂತರಾಜು, ಸಿ. ಭಾನುಪ್ರಕಾಶ್, ಊರ್ಡಿಗೆರೆ ಕೆಂಪರಾಜು, ಗೂಳೂರು ಸಿದ್ದರಾಜು, ಕೇಬಲ್ ರಘು, ಹೆಗ್ಗೆರೆ ಕೃಷ್ಣಪ್ಪ, ಮರಳೂರು ಕೃಷ್ಣಮೂರ್ತಿ, ಕನಕ ಸೇನೆಯ ಕೆಂಪರಾಜು, ಜೆ.ಕೆ. ಸಮಿ, ಸೋಮಶೇಖರ್, ರಾಮಕೃಷ್ಣಯ್ಯ, ಅಂಬೇಡ್ಕರ್ ಯುವ ಸೇನೆಯ ಜಿ. ಗಣೇಶ್ ಇತರರು ಪಾಲ್ಗೊಂಡಿದ್ದರು.
ದಿಬ್ಬಣದ ಮೇಲೆ ಹೆಜ್ಜೇನು ದಾಳಿ: 25 ಮಂದಿ ಆಸ್ಪತ್ರೆಗೆ ದಾಖಲು
ತುರುವೇಕೆರೆ: ಮದುವೆ ಮುಗಿಸಿಕೊಂಡು ವಿಶ್ರಾಂತಿ ಪಡೆಯಲೆಂದು ಕೆಲ ಕಾಲ ಮರದ ಕೆಳಗೆ ಕುಳಿತಿತ್ತ ಮದುವೆ ದಿಬ್ಬಣದ ಮೇಲೆ ಮರದ ಮೇಲಿದ್ದ ಹೆಜ್ಜೇನಿನ ದಂಡು  ದಾಳಿ ಮಾಡಿದ ಘಟನೆ ಸಮೀಪದ ಅಂಚಿಹಳ್ಳಿಯಿಂದ ವರದಿಯಾಗಿದೆ.
ಸುಮಾರು 25 ಮಂದಿಗೆ ಹೆಜ್ಜೇನು ಕಡಿದಿದೆ. ಇವರಲ್ಲಿ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತಿಪಟೂರು ತಾಲೂಕು ಹುಚ್ಚನಹಟ್ಟಿಯವರು ಮಾಗಡಿ ತಾಲೂಕು ವೀರಾಪುರ ಗೊಲ್ಲರಹಟ್ಟಿಯಲ್ಲಿ ನಡೆದಿದ್ದ ಮದುವೆಗೆಂದು ತೆರಳಿತ್ತು. ಸೋಮವಾರ ಸಾಯಂಕಾಲದ ವೇಳೆಗೆ ತಾಲೂಕಿನ ಅಂಚಿಹಳ್ಳಿಯಲ್ಲಿ ವಿಶ್ರಾಂತಿ ಪಡೆಯಲೆಂದು ಮರದ ಕೆಳಗೆ ಕುಳಿತಿದ್ದರು. ಇದೇ ವೇಳೆ ಮರದ ಮೇಲೆ ಗೂಡುಕಟ್ಟಿದ್ದ ಹೆಜ್ಜೇನುಗಳು ದಿಢೀರನೇ ಮದುವೆ ದಿಬ್ಬಣದ ಮೇಲೆ ದಾಳಿ ಮಾಡಿವೆ. ಕ್ಯಾಂಟರ್‌ನಲ್ಲಿ ಸುಮಾರು 40 ಮಂದಿ ಇದ್ದರೆಂದು, ವಿಶ್ರಾಂತಿಗೆಂದು ವಾಹನದಿಂದ ಕೆಳಗೆ ಇಳಿದಿದ್ದ ಸುಮಾರು 25 ಮಂದಿಗೆ ಹೆಜ್ಜೇನು ದಾಳಿ ಮಾಡಿ ಕಚ್ಚಿದೆ. ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿದ ನಂತರ ಕೆಲವರನ್ನು ತಿಪಟೂರು ಆಸ್ಪತ್ರೆಗೆ ಸೇರಿಸಲಾಗಿದೆ. ಮಹಲಿಂಗಯ್ಯ, ರಘು, ಸುಧಾಕರ್, ಸುಚಿತ್ರಾ (6), ಗಂಗಾಧರ್, ಶಿವಯ್ಯ, ವಾಹನ ಚಾಲಕ ಕುಮಾರಯ್ಯ, ಬಾಲರಾಜು ಅವರಿಗೆ ತೀವ್ರ ಗಾಯಗಳಾಗಿದೆ ಎಂದು ಪ್ರತ್ಯಕ್ಷದರ್ಶಿ ಅಣ್ಣಯ್ಯಪ್ಪ ತಿಳಿಸಿದ್ದಾರೆ.
ಮಾಹಿತಿ ನೀಡದ ತಹಸೀಲ್ದಾರ್‌ಗೆ 5 ಸಾವಿರ ದಂಡ
ಕುಣಿಗಲ್: ನಿಗದಿತ ಅವಧಿಯಲ್ಲಿ ಮಾಹಿತಿ ನೀಡಲು ವಿಫಲರಾದ ಈ ಹಿಂದಿನ ತಹಸೀಲ್ದಾರ್ ಅವರಿಗೆ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಐದು ಸಾವಿರ ರು. ದಂಡ ವಿಧಿಸಿದ್ದಾರೆ.
 ತಾಲೂಕಿನ ರಾಮಲಿಂಗಯ್ಯನವರು ಅಮೃತೂರು ಹೋಬಳಿ ಹೊಸಪುರ ಗ್ರಾಮದ ಸರ್ವೆ ನಂ.52 ಮತ್ತು 54ರ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ಕೋರಿ ದಿ.30-03-2012ರಲ್ಲಿ ಅರ್ಜಿ ಸಲ್ಲಿಸಿದರು. ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಕಾರಣ ಪ್ರಥಮ ಮೇಲ್ಮನವಿ ಅಧಿಕಾರಿಗಳಾದ ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಪ್ರಯೋಜನವಾಗದ ಕಾರಣ ರಾಜ್ಯ ಮಾಹಿತಿ ಅಯೋಗದ ಮೊರೆ ಹೋದರು,   ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಿಗೆ, ತಾಲೂಕಿನ ಈ ಹಿಂದಿನ ತಹಸೀಲ್ದಾರ್ ಎನ್.ಸಿ.ಜಗದೀಶ್ ಅವರು, ತಾವು ಕಾರ್ಯಭಾರ ವಹಿಸಿಕೊಂಡಾಗ ವಿಷಯ ನಿರ್ವಾಹಕರು ತಮ್ಮ ಗಮನಕ್ಕೆ ವಿಷಯ ತಾರದ ಕಾರಣ ಮಾಹಿತಿ ನೀಡಲಾಗಲಿಲ್ಲ ಎಂದು ಸಮರ್ಥನೆ ನೀಡಿದರು.
   ಆದರೆ ಆಯೋಗವು ತಹಸೀಲ್ದಾರರ ಸಮರ್ಥನೆಯನ್ನು ಒಪ್ಪದೆ, ತಹಸೀಲ್ದಾರ್ ಆಗಿ ಕಾರ್ಯಭಾರ ವಹಿಸಿಕೊಂಡ 30 ದಿನದೊಳಗೆ ಮಾಹಿತಿ ನೀಡಬೇಕಾಗಿದ್ದು, ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಅಂದಿನ ಮತ್ತು ಹಾಲಿ ಚಿಕ್ಕಬಳ್ಳಾಪುರ ತಹಸೀಲ್ದಾರ್ ಆಗಿರುವ ಎನ್.ಸಿ.ಜಗದೀಶ್ ಮಾಹಿತಿ ನೀಡವಲ್ಲಿ ವಿಫಲವಾಗಿರುವುದರಿಂದ, ಅವರ ಸ್ವಂತ ವೇತನದಿಂದ ಐದುಸಾವಿರ ರೂಪಾಯಿಗಳನ್ನು ಪಾವತಿಸುವಂತೆ ದಂಡ ವಿಧಿಸಿದ್ದಾರೆ.
 ಮೇಲ್ಮನವಿಗಳನ್ನು ನಿಗದಿಪಡಿಸಲಾದ ಕಾಲಮಿತಿಯೊಳಗೆ ವಿಲೇ ಮಾಡದ ಸಂಬಂಧಪಟ್ಟ ತುಮಕೂರು ಉಪವಿಭಾಗಾಧಿಕಾರಿ ಹಾಗೂ ಮೊದಲನೆ ಮೇಲ್ಮನವಿ ಪ್ರಾಧಿಕಾರಿಗಳು, ಆಯೋಗದ ನಿರ್ದೇಶನದ ಹೊರತಾಗಿ ಮೇಲ್ಮನವಿಗಳನ್ನು ನಿಗದಿತ ಕಾಲವಧಿಯೊಳಗೆ ವಿಲೆಮಾಡದಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ತುಮಕೂರು ಜಿಲ್ಲಾಧಿಕಾರಿ ಹಾಗೂ ಬೆಂಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದಾರೆ.
ಬೀದಿದೀಪ ದುರಸ್ತಿಗೆ ಸಂಪರ್ಕಿಸಿ
ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಕಾಣಿಸಿದ ವಾರ್ಡ್‌ವಾರು ಸ್ಥಳಗಳಲ್ಲಿ ಬೀದಿ ದೀಪ ದುರಸ್ತಿ ಮತ್ತು ನಿರ್ವಹಣೆಯನ್ನು ವಿನಾಯಕ ಎಲೆಕ್ಟ್ರಿಕಲ್ಸ್, ಬೆಂಗಳೂರು ಇವರಿಗೆ ನೀಡಿದ್ದು, ಬೀದಿ ದೀಪ ದುರಸ್ಥಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನೇರವಾಗಿ ಈ ದೂರವಾಣಿಗಳನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಕೋರಿದ್ದಾರೆ. ವಾರ್ಡ್ ಸಂಖ್ಯೆ 1,2,3,4,5,6,7 ಕ್ಕೆ ಸಂಬಂಧಿಸಿದಂತೆ ದೂ.ವಾ.ಸಂ. 9481264372.ವಾರ್ಡ್ ಸಂಖ್ಯೆ 8,9,10,11,12,13,14 ಕ್ಕೆ ಸಂಬಂಧಿಸಿದಂತೆ ದೂ.ವಾ.ಸಂ.9481264291.ವಾರ್ಡ್ ಸಂಖ್ಯೆ 15,17,18, 24,25,26,27,28 ಮತ್ತು 29 ಕ್ಕೆ ಸಂಬಂಧಿಸಿದಂತೆ ದೂ. ಸಂ 9481264392. ವಾರ್ಡ್ ಸಂಖ್ಯೆ 16,19,20,21,22,23,35 ಕ್ಕೆ ಸಂಬಂಧಿಸಿದಂತೆ ದೂ.ಸಂ. 9481264397 ವಾರ್ಡ್ ಸಂಖ್ಯೆ 30,31,32,33 34 ಕ್ಕೆ ಸಂಬಂದಿಸಿದಂತೆ ದೂ.ಸಂ.
ಅಂಬೇಡ್ಕರ್,  ಜಯಂತಿ ಇಂದು
ಗುಬ್ಬಿ: ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಮತ್ತು ಬಾಬು ಜಗಜೀವನರಾಂ  ಜನ್ಮ ದಿನಾಚರಣೆ ಸಮಾರಂಭವನ್ನು ಗುಬ್ಬಿ ತಾಲೂಕಿನ ಎಂ.ಎನ್.ಕೋಟೆ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಏ.22 ರಂದು ಏರ್ಪಡಿಸಲಾಗಿದ್ದು ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿ ಸಂಚಾಲಕ ನಿಟ್ಟೂರು ರಂಗಸ್ವಾಮಿ ಉದ್ಘಾಟಿಸಲಿದ್ದಾರೆ. ಬಿಎಸ್‌ಪಿ ಜಿಲ್ಲಾಧ್ಯಕ್ಷ ಮಾರನಹಳ್ಳಿ ಶಿವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಎನ್.ಎ.ನಾಗರಾಜು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಜಿ.ಸಿ. ಮಲ್ಲಿಕಾರ್ಜುನಸ್ವಾಮಿ, ಕೇಬಲ್ ರಘು, ಮರಳೂರು ಕೃಷ್ಣಮೂರ್ತಿ, ಗಾಂಧಿರಾಜು ಹೆಬ್ಬೂರು, ಜಯರಾಂ, ಗ್ರಾಮ ಪಂಚಾಯ್ತಿ ಸದಸ್ಯೆ ಗಂಗಾಣಮ್ಮ, ಮುಖಂಡರಾದ ರಾಜಣ್ಣ, ಗಂಗಾಧರಸ್ವಾಮಿ, ಸಿದ್ದಲಿಂಗಪ್ಪ, ಭೀಮಶೆಟ್ಟಿ, ಎಂ.ವಿ. ಶಿವಕುಮಾರ್, ಜಿ.ಸಿ.ದುರ್ಗೇಶ್, ಜಿ.ಸಿ. ನಾಗರಾಜು, ಸಿ.ನರಸಿಂಹಮೂರ್ತಿ, ಜಗದೀಶ್, ಕೆ.ರಾಜಪ್ಪ, ಚೇಳೂರು ಶಿವನಂಜಪ್ಪ, ನಾಗಭೂಷಣ್, ದಿವಾಕರಯ್ಯ, ಗಂಗಾರಾಂ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ದಿ. ಎಂ.ಡಿ.ದೊಡ್ಡೇಗೌಡ ಮತ್ತು ದಿ. ಚೇಳೂರು ವೆಂಕಟೇಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement