ಕಾಡಾನೆ ದಾಳಿಯಿಂದ ರೈತನಿಗೆ ಗಾಯ
ಕ.ಪ್ರ.ವಾರ್ತೆ , ಸರಗೂರು , ಏ. 22
ಕಾಡಾನೆ ದಾಳಿಯಿಂದ ರೈತರೊಬ್ಬರು ಗಾಯಗೊಂಡಿರುವ ಘಟನೆ ಸಮೀಪದ ಎಚ್.ಡಿ. ಕೋಟೆ ತಾಲೂಕಿನ ಕೊತ್ತೆಗಾಲದಲ್ಲಿ ಜರುಗಿದೆ.
ಕೊತ್ತೆಗಾಲ ಗ್ರಾಮದ ಸಮೀಪದ ಜಯನಗರದ ಪುಟ್ಟಮಲ್ಲೇಗೌಡ (75) ಕಾಡಾನೆ ದಾಳಿಗೊಳಗಾದ ರೈತ.
ಪುಟ್ಟಮಲ್ಲೇಗೌಡ ಸುಮಾರು 6.30 ರಲ್ಲಿ ತನ್ನ ಜಮೀನಿಗೆ ಹೋಗಿದ್ದಾಗ ಪಕ್ಕದ ಜಮೀನಿನಲ್ಲಿ ಕಾಡಾನೆ ಕಬ್ಬನ್ನು ತಿಂದು ನಾಶ ಮಾಡಿ ಬರುವಾಗ, ಈತನ ಮೇಲೆ ದಾಳಿ ಮಾಡಿ ಸುಮಾರು ದೂರ ಎಸೆದಿದೆ. ಪಕ್ಕದಲ್ಲಿದ್ದ ಮುತ್ತಣ್ಣ, ಶಿವಣ್ಣೇಗೌಡ, ಚಿನ್ನಿ ಎಂಬ ರೈತರು ಕೂಗಿ ಸದ್ದು ಮಾಡಿದಾಗ ಕಾಡಾನೆ ಸ್ಥಳದಿಂದ ಕಾಲುಕಿತ್ತಿದೆ. ಕಾಡಾನೆ ದಾಳಿಯಿಂದ ಪುಟ್ಟಮಲ್ಲೇಗೌಡ ಸೊಂಟ, ಎದೆ ಹತ್ತಿರ ಗಂಭೀರ ಗಾಯವಾಗಿದ್ದು, ತಕ್ಷಣ ಗ್ರಾಮಸ್ಥರ ಸಹಾಯದಿಂದ ವಲಯ ಅರಣ್ಯ ಆಧಿಕಾರಿಗಳಾದ ಮಹೇಶ್, ಉಪವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್ ಆಂಬ್ಯುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಕಾಡಾನೆ ಸುಮಾರು ದಿನಗಳಿಂದಲೂ ದನಗಳು ಮೇಯುವ ಹಾಗೆ ಗದ್ದೆ, ಹೊಲಗಳಲ್ಲಿ ಅಡ್ಡಾಡಿ ರೈತರು, ಬೆಳೆದ ಫಸಲನ್ನು ತಿಂದು ನಾಶ ಮಾಡುತ್ತಿದೆ. ರಾತ್ರಿ ಹಗಲೆನ್ನದೆ ಎಲ್ಲೆಂದರಲ್ಲಿ ಕಾಣಿಸಿಕೊಂಡು ರೈತರ ಜಮೀನಿಗೆ ಹೋಗಿ ಬರಲು ಕಷ್ಟವಾಗಿದೆ. ಇಷ್ಟಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ರೈತ ಪುಟ್ಟಮಲ್ಲೇಗೌಡ ಅವರನ್ನು ಆನೆ ದಾಳಿ ಮಾಡಿದಾಗ ರೈತರು ಇಲ್ಲದಿದ್ದರೆ ಇವರನ್ನು ಕಾಡಾನೆ ತುಳಿದು ಸಾಯಿಸುತ್ತಿತ್ತು.
ಗಾಯಗೊಂಡಿರುವ ರೈತನಿಗೆ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಜೊತೆಗೆ ಹಾನಿ ಮಾಡಿರುವ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೂ ಸಹ ಪರಿಹಾರ ನೀಡಬೇಕೆಂದು ರೈತ ಮುಖಂಡರಾದ ಹೀರೆಗೌಡ, ಮಾದೇಗೌಡ, ಮುತ್ತಣ್ಣ, ಶಿವಣ್ಣೇಗೌಡ, ಚಿನ್ನಿ, ಗುಂಡುರಾವು, ಡಿ. ನಾಗರಾಜು, ಶಿವಲೀಗೆಗೌಡ, ರಾಜೇಗೌಡ, ಮಹದೇವು ಆಗ್ರಹಿಸಿದ್ದಾರೆ.
ವಲಯ ಅರಣ್ಯ ಆಧಿಕಾರಿಗಳಾದ ಮಹೇಶ್ ಮಾತನಾಡಿ, ಮೊಳಿಯೂರು ವಲಯ ಕಡೆಯಿಂದ ಈ ಕಾಡಾನೆ ಸರಗೂರು ವಲಯ ಕಡೆ ಬಂದಿದೆ. ನಾವು ಹಲವಾರು ಸಲ ಕಾಡಿಗೆ ಓಡಿಸಿದ್ದರೂ ಸಹ ಫಸಲಿನ ರುಚಿಗೆ ಮತ್ತೆ ಆನೆ ಇತ್ತ ಕಡೆ ಬಂದಿದೆ. ಮೇಲಾಧಿಕಾರಿಯವರ ಜೊತೆ ಚರ್ಚಿಸಿ ಈ ಕಾಡಾನೆ ಹಿಡಿಯಲಾಗುವುದು. ರೈತರ ಸಹಕಾರ ನಮಗೆ ಮುಖ್ಯ ಎಂದು ಹೇಳಿದರು.
ಚಿರತೆ ದಾಳಿಗೆ ಕೋಳಿ ಬಲಿ
ಹುಣಸೂರು: ಎರಡು ಚಿರತೆಗಳ ದಾಳಿಗೆ ಎಂಟು ಕೋಳಿ ಬಲಿಯಾಗಿರುವ ಘಟನೆ ತಾಲೂಕಿನ ಹಳೆಪುರದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿನ ನರಸಿಂಹೇಗೌಡರಿಗೆ ಸೇರಿದ ಪಂಪ್ಸೆಟ್ ಜಮೀನಿನಲ್ಲಿ ಸಾಕುತಿದ್ದ ಕೋಳಿ ಗೂಡಿಗೆ ಸೋಮವಾರ ದಾಳಿಯಿಟ್ಟಿರುವ ಚಿರತೆಗಳು ಕೋಳಿಯನ್ನು ಹೊತ್ತೊಯ್ದಿವೆ. ಈ ಭಾಗದಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಆಗ್ಗಾಗೆ ಜಾನುವಾರುಗಳು, ಕೋಳಿಗಳು, ನಾಯಿಗಳು ಬಲಿ ಆಗುತ್ತಿವೆ. ಚಿರತೆ ಹಾವಳಿ ತಪ್ಪಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.