ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮದ್ಯದ ಅಂಗಡಿ ತೆರೆಯಲು ಪರವಾನಗಿಗೆ ಆಕ್ರೋಶ

Vishwanath S
Updated On : 23 Apr 2014, 12:51 pm

ಪಾವಗಡ: ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಿದ ಕ್ರಮದ ವಿರುದ್ಧ ರೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ರಾಮಾಂಜಿನಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಗುರುಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 676ನೇ ಮದ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆದಾಯ ದೃಷ್ಟಿಯಿಂದ ಸರ್ಕಾರ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಿದ ಕಾರಣ ಇಂದು ಸಾವಿರಾರು ಗ್ರಾಮೀಣ ಯುವಕರು ಕುಡಿತದ ದಾಸರಾಗಿದ್ದು ದುಡಿದ ಹಣ ನಿತ್ಯ ಕುಡಿತಕ್ಕೆ ವ್ಯಯ ಮಾಡುವುದರಿಂದ
ಅನೇಕ ಬಡ ಕುಟುಂಬಗಳು ಇಂದು ಬೀದಿ ಪಾಲಾಗುತ್ತಿವೆ ಎಂದರು. ಜನಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಮದ್ಯದಂಗಡಿಗಳ ಪರವಾನಗಿ ರದ್ದು ಪಡಿಸಿ ಸರ್ಕಾರ ಕ್ರಮ ಕೈಗೊಂಡು ಮದ್ಯದಂಗಡಿಗಳನ್ನು ಮುಚ್ಚಿಸಲು ಒತ್ತಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಗ್ರಾಮೀಣ ಸೇವೆ ಕುರಿತು ಪ್ರಶಂಸಿಸಿದ ಅವರು ತಾಲೂಕಿನಲ್ಲಿ 4 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಕುಡಿತದ ಚಟ ಬಿಡಿಸಿ ಅನೇಕ ಸಂಸಾರಗಳ ನೆಮ್ಮದಿಯ ಜೀವನಕ್ಕೆ ಸಂಸ್ಥೆ ದಾರಿ ದೀಪವಾಗಿದೆ ಎಂದರು.
ಸಂಸ್ಥೆಯ ಯೋಜನಾಧಿಕಾರಿ ಸತೀಶ್ ನಾಯ್ಕ್ ಮಾತನಾಡಿ, ಮದ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯುವಕರಿಗೆ ಮನವರಿಕೆ ಮತ್ತು ಸಲಹೆ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಲೋಕ ಕಲ್ಯಾಣಾಕ್ಕಾಗಿ ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸೇವೆ ಕುರಿತು ವಿವರಿಸಿದರು.
ಸಾಹಿತಿ ಬ್ಯಾಡನೂರು ಚನ್ನಬಸವಣ್ಣ, ಪತ್ರಕರ್ತ ಸತ್ಯಾ ಲೋಕೇಶ್, ತಿಮ್ಮರಾಜ್ ಇತರರು ಮದ್ಯ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಕೆ.ಎಚ್. ನರಸಿಂಹಮೂರ್ತಿ ವಹಿಸಿದ್ದು, ಶಿಬಿರಾಧಿಕಾರಿ ರಾಘವೇಂದ್ರಚಾರ್ಯ, ಪತ್ರಕರ್ತ ಜಯಸಿಂಹ, ಮನೋಜ್, ಶಿಲ್ಪ ಮಂಜುನಾಥ್, ಅನಿತಾ, ಭಾಗ್ಯ, ಈಶ್ವರಮ್ಮ, ಶ್ರೀನಿವಾಸ್ ಮುಂತಾವರು ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement