ಗ್ರಂಥಾಲಯ ಕ್ಷೇತ್ರದಲ್ಲೂ ಭಾರಿ ಬದಲಾವಣೆ
ಕನ್ನಡಪ್ರಭ ವಾರ್ತೆ ಕುಣಿಗಲ್ ಏ.23
ವಿದ್ಯುನ್ಮಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಘಾದ ಅವಿಷ್ಕಾರ ಮತ್ತು ಸಂಶೋಧನೆಗಳ ಫಲಶ್ರುತಿಗಳು ಹೊರಬೀಳುತ್ತಿರುವಂತೆ, ಶೈಕ್ಷಣಿಕ ರಂಗದಲ್ಲೂ ಹಲವು ಬದಲಾವಣೆಗಳಾಗುತ್ತಿದೆ. ಜೊತೆಯಲ್ಲಿ ಗ್ರಂಥಾಲಯ ಕ್ಷೇತ್ರದಲ್ಲೂ ಬದಲಾವಣೆ ಕಂಡುಬರುತ್ತಿವೆ ಎಂದು ಧಾರವಾಡ ಕೃಷಿ ವಿವಿಯ ಗ್ರಂಥಾಲಯ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಸ್ಟಾನ್ಲಿ ಮದನಕುಮಾರ್ ತಿಳಿಸಿದರು.
ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಗ್ರಂಥಾಲಯ ವಿಭಾಗ ಮತ್ತು ಪ್ರೊ.ಎಂ.ಆರ್. ಕುಂಭಾರ ಸ್ಮಾರಕ ಉಪನ್ಯಾಸಮಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಭವಿಷ್ಯದ ಗ್ರಂಥಾಲಯ ಮತ್ತುಅಂತರ್ಜಾಲ ಪೀಳಿಗೆ ವಿದ್ಯಾರ್ಥಿಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕಾಲಕಳೆದಂತೆ ಕೇವಲ ದಶಕದ ಅವಧಿಯಲ್ಲೆ ಒಂದು ಪೀಳಿಗೆ ಮತ್ತು ಮತ್ತೊಂದು ಪೀಳಿಗೆಯವರ ನಡುವೆ ಪ್ರತಿಯೊಂದು ವಿಷಯಗಳಲ್ಲೂ ಅಘಾದ ವ್ಯತ್ಯಾಸಗಳು ಕಂಡುಬರುತ್ತಿದೆ. ಶೈಕ್ಷಣಿಕ ರಂಗದಲ್ಲೂ ಸಾಂಪ್ರದಾಯಿಕ ವ್ಯವಸ್ಥೆ ಮತ್ತು ಪದ್ಧತಿಗಳು ಬದಲಾಗಿ, ಇಂದಿನ ಅಂತರ್ಜಾಲ ವ್ಯವಸ್ಥೆ ಆಧರಿತ ಶೈಕ್ಷಣಿಕ ವ್ಯವಸ್ಥೆಗೆ ಒಗ್ಗಿಕೊಳ್ಳುವಂತ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ಜನಪ್ರಿಯ: ಕಳೆದ ಕೆಲ ದಶಕಗಳಲ್ಲಿನ ಗಣಕಯಂತ್ರದ ಗಾತ್ರ ಮತ್ತು ಕಾರ್ಯವೈಖರಿಗಳ ಬಗ್ಗೆ ಸುಧಾರಿತ ಪ್ರಯೋಗಗಳು ಯಶಸ್ವಿಯಾಗಿ ಸಾಮಾನ್ಯ ಜನತೆಗೆ ಮುಟ್ಟಿದ ಪರಿಣಾಮ ಕೈಗೆಟಕುವ ದರದಲ್ಲಿ ಕಡಿಮೆ ದರ ದಲ್ಲಿ ಸುಧಾರಿತ ಗಣಕಯಂತ್ರದ ಮಾದರಿಗಳಾದ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ಗಳು ಜನಪ್ರಿಯವಾಗುತ್ತಾ
ವಿದ್ಯಾರ್ಥಿಗಳ ಕೈಗೆ ಸಿಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಬೇಕೆಂದ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆಯುವ ಮೂಲಕ ಸುಧಾರಿತ ಇ-ಶೈಕ್ಷಣಿಕ ವ್ಯವಸ್ಥೆಯಡಿಯಲ್ಲಿ ಹಲವು ಇ-ಗ್ರಂಥಗಳನ್ನು ಇದ್ದಲ್ಲೆ ಪಡೆಯುವ ಮೂಲಕ ಗ್ರಂಥಾಲಯ ಕ್ಷೇತ್ರದಲ್ಲೂ ಅಘಾದ ಬದಲಾವಣೆ ಕಾಣಬಹುದಾಗಿದೆ.
ಬಾಯಾರಿದವರು ಹೇಗೆ ದಾಹ ಇಂಗಿಸಲು ಜಲಮೂಲ ಆರಿಸುವರೋ ಹಾಗೆ, ಉತ್ತಮ ಜ್ಞಾನದ ದಾಹ ಉಳ್ಳಂತಹ ವಿದ್ಯಾರ್ಥಿಗಳು ಬದಲಾದ ತಂತ್ರಜ್ಞಾನ ವ್ಯವಸ್ಥೆಯ ಲಾಭ ಪಡೆದು ಉತ್ತಮ ಜ್ಞಾನ ಪಡೆಯಬಹದೆಂದ ಅವರು, ವಿದ್ಯುನ್ಮಾನ ಸಾಧನಗಳು ವಾರಕ್ಕೊಂದರಂತೆ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಗ್ರಾಹಕರೆ ಗೊಂದಲಕ್ಕೊಳಗಾಗುವಂತಾಗಿದೆ. ಅದೇ ರೀತಿಯ ಮೊಬೈಲ್ ಭಾಷೆಗಳ ತೀವ್ರ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ವ್ಯಾಕರಣ ದೋಷ ತೀವ್ರವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಅರ್ಥಪೂರ್ಣ: ಉಪನ್ಯಾಸಮಾಲೆಯಸಂಚಾಲಕ ಪ್ರೊ.ಕೆ.ಎನ್.ಪ್ರಸಾದ್, ಏ.23, ವಿಶ್ವಪುಸ್ತಕ ಮತ್ತು ಕಾಪಿರೈಟ್ ದಿನಾಚರಣೆಯಾಗಿದ್ದು, ಈ ದಿನದಂದೆ ಈ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿದೆ. ಪುಸ್ತಕ ದಿನವೆಂದರೆ,
ಓದುಗರಿಗೆ ಕೇವಲ ಹೊಸ ಪುಸ್ತಕಗಳನ್ನು ಪರಿಚಯಿಸುವ ದಿನವಲ್ಲ, ಪುಸ್ತಕ ಪ್ರಪಂಚಕ್ಕೆ ಅತ್ಯುತ್ತಮ ಪುಸ್ತಕಗಳನ್ನು ರೂಪಿಸಿ, ಒದುಗರ ಅಭಿರುಚಿ ಹೆಚ್ಚುವಂತೆ ಮಾಡಿದ ಅತ್ಯುತ್ತಮ ಸಾಹಿತಿ, ಲೇಖಕರ ಸಾಧನೆಗಳನ್ನು ಸ್ಮರಿಸಿ, ಅವರಿಗೆ ಗೌರವಾದರಗಳನ್ನು ಸಲ್ಲಿಸುವ ದಿನವಾಗಿದೆ. ಗ್ರಂಥಾಲಯ ಪಿತಾಮಹ ಪ್ರೊ.ರಂಗನಾಥ್ ಅವರ ಶಿಷ್ಯರಾದ ಪ್ರೊ.ಎಂ.ಆರ್. ಕುಂಭಾರ ಅವರು ಗ್ರಂಥಾಲಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಗ್ರಂಥಾಲಯ ಮಹತ್ವವನ್ನು ಅದರ ಸದ್ಬಳಕೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕೈಗೊಂಡ ಹಲವು ಕಾರ್ಯಕ್ರಮಗಳ ಪೈಕಿ ಈ ಕಾರ್ಯಕ್ರಮವೂ ಒಂದಾಗಿದೆ ಎಂದರು.
ಪ್ರಾಚಾರ್ಯಡಾ.ಎಂ.ಎಸ್. ನರಸಿಂಹನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮೋಹನ್ ಕುಮಾರ್, ಪ್ರೊ.ಕಲ್ಯಾಣ್, ಪ್ರೊ. ಅಸುಂಡಿ, ಪ್ರೊ.ಶಿವಸಿದ್ದಪ್ಪ, ಉಪನ್ಯಾಸಕರಾದ ರಮೇಶ್, ಡಿ.ಕೃಷ್ಣ, ಪುಷ್ಪಭಾರತಿ, ಗ್ರಂಥಪಾಲಕಿ ಮಮತಾ, ತುಮಕೂರು ಕಾಲೇಜಿನ ಗ್ರಂಥಪಾಲಕ ಪ್ರಸಾದ್ ಇತರರು ಉಪಸ್ಥಿತರಿದ್ದರು.