ಪ್ರಾಂಶುಪಾಲರ ಗೈರುಹಾಜರಿಗೆ ಶಾಸಕರ ಆಕ್ಷೇಪ
ಮಧುಗಿರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಕೆ.ಎನ್.ರಾಜಣ್ಣ ದಿಢೀರ್ ಭೇಟಿ ನೀಡಿ ಪ್ರಾಂಶುಪಾಲರು ಮತ್ತು ಗ್ರಂಥಪಾಲಕರ ಗೈರು ಹಾಜರಿ ಕಂಡು ಕಿಡಿಕಾರಿದರು.
ಕಾಲೇಜು ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನಲೆಯಲ್ಲಿ ಕೆ.ಎನ್.ರಾಜಣ್ಣ ಬುಧವಾರ ಭೇಟಿ ನೀಡಿದಾಗ ಕೆಲ ಉಪನ್ಯಾಸಕರು ಮಾತ್ರ ಇದ್ದರು. ಪ್ರಾಂಶುಪಾಲರು ಕೇಂದ್ರ ಸ್ಥಾನದಲ್ಲಿರದೇ ನಿತ್ಯ ಬೆಂಗಳೂರಿಂದ ಬರುವ ಬಗ್ಗೆ ಮಾಹಿತಿ ಪಡೆದು ಹಾಜರಾತಿ ಪುಸ್ತಕ ಪರಿಶೀಲಿಸಿದರು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ನಮಗೆ ಸಮಾಜ ಕಲ್ಯಾಣ ಇಲಾಖೆಯಿಂದ 1,42,740 ರು.ಮಂಜೂರಾಗಿದ್ದು, ಈ ಪೈಕಿ ವಿದ್ಯಾರ್ಥಿ ವೇತನದ ಚೆಕ್ ಶಾಲೇಜಿಗೆ ನೀಡಿದ್ದರೂ ಕೂಡ ಈವರೆಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ ಎಂದು ಅಳಲನ್ನು ಶಾಸಕರ ಬಳಿ ತೋಡಿಕೊಂಡರು. ದಾಖಲಾತಿ ಪರಿಶೀಲಿಸಿ ವಿದ್ಯಾರ್ಥಿ ವೇತನ ಕೊಡಿಸುವುದಾಗಿ ರಾಜಣ್ಣ ಭರವಸೆ ನೀಡಿದರು. ಗ್ರಂಥಾಲಯಕ್ಕೆ ಭೇಟಿ ನೀಡಲು ಮುಂದಾದಾಗ ಬೀಗ ಜಡಿದಿದ್ದನ್ನು ಕಂಡು ಇಲ್ಲಿನ ನೌಕರರ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು. ಗ್ರಂಥಪಾಲಕರು ಕೂಡ ಬೆಂಗಳೂರಿಂದ 12 ಗಂಟೆಗೆ ಬಂದು ಮಧ್ಯಾಹ್ನ 3ಕ್ಕೆ
ಬಾಗಿಲು ಹಾಕಿ ಹೋಗುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು. ಆ ವೇಳೆಗೆ ಬಂದ ಗ್ರಂಥಪಾಲಕರನ್ನು ಕೆ.ಎನ್.ರಾಜಣ್ಣ ತರಾಟೆಗೆ ತೆಗೆದುಕೊಂಡು ಮಧುಗಿರಿ ಅತ್ಯಂತ ಹಿಂದುಳಿದ ಪ್ರದೇಶ. ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸುವ ಶಕ್ತಿ ಇಲ್ಲ. ನಿತ್ಯ ಮಾಹಿತಿ ಪಡೆಯಲು ದಿನ ಪತ್ರಿಕೆ ಓದಲು ಸಾಮಾನ್ಯ ಜ್ಞಾನ ಸಂಪಾದಿಸಲು ಗ್ರಂಥಾಲಯಗಳು ದಾರಿದೀಪ, ಅಂಥದ್ದರಲಿಛ್ಲ ಗ್ರಂಥಪಾಲಕರೇ ಬೇಕಾ ಬಿಟ್ಟಿ ಬಂದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಲ್ಲವೇ ಎಂದು ಪ್ರಶ್ನಿಸಿ, ತಾವು ಇಲ್ಲಿ ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲವಾದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಗುಡುಗಿದರು.