ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೃಷಿ ಭೂಮಿಗೆ ಚಿಪ್ಪು ನೀಡುವ ತಪ್ಪು!

Mainashree
Updated On : 26 Apr 2014, 12:18 pm

ಬಿ.ರಂಗಸ್ವಾಮಿ  
ಕನ್ನಡಪ್ರಭ ವಾರ್ತೆ  ತಿಪಟೂರು  ಏ.25
ತಾಲೂಕಿನಾದ್ಯಂತ ಅಕ್ರಮ ಮತ್ತು ಅನಧಿಕೃತವಾಗಿ ತೆಂಗಿನ ಚಿಪ್ಪುಗಳನ್ನು ಹಾಡ ಹಗಲೇ ಕೃಷಿ ಭೂಮಿಯ ಬಯಲು ಪ್ರದೇಶಗಳಲ್ಲೇ ಸುಡುತ್ತಿದ್ದು, ಇದರಿಂದ ಭುಗಿಲೇಳುವ ದಟ್ಟ ಹೊಗೆಯಿಂದ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ.
ಇದು ತೆಂಗು ಸೇರಿದಂತೆ ಇತರೆ ಕೃಷಿ ಇಳುವರಿ ಮೇಲೆ ತೀವ್ರ ಪ್ರಭಾವ ಬೀರುತ್ತಿರುವುದಲ್ಲದೆ ಪರಿಸರಕ್ಕೆ ತೀವ್ರ ಧಕ್ಕೆಯಾಗಿದೆ.
ಪರಿಸರ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಿಂದ ಪರವಾನಗಿ ಪಡೆಯದೆ ಅನೇಕರು ತಾಲೂಕಿನಾದ್ಯಂತ ಅಕ್ರಮ ಮತ್ತು ಅನಧಿಕೃತವಾಗಿ ತೆಂಗಿನ ಚಿಪ್ಪುಗಳನ್ನು ಹಾಡ ಹಗಲೇ ಕೃಷಿ ಭೂಮಿಯ ಬಯಲು ಪ್ರದೇಶಗಳಲ್ಲೇ ಸುಡುತ್ತಿದ್ದಾರೆ.
ತಾಲೂಕಿನ ಅನೇಕ ಭಾಗಗಳಲ್ಲಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದರೂ, ಈ ಅಕ್ರಮ ದಂಧೆ ತಡೆಗಟ್ಟಬೇಕಾದ ಕಂದಾಯ ಅಧಿಕಾರಿಗಳು ನೆಪಮಾತ್ರಕ್ಕೆ ನೋಟಿಸ್ ನೀಡಿ ಮಾಮೂಲು ಪಡೆದು ಕೈತೊಳೆದುಕೊಳ್ಳುತ್ತಿರುವುದು ತಾಲೂಕಿನ ದುರಂತವೇ ಸರಿ ಎಂದು ನಾಗರಿಕರು ಅಲವತ್ತುಕೊಳ್ಳುವಂತಾಗಿದೆ.
ಚಿಪ್ಪು ಸುಡುವ ಉದ್ಯಮಿಗಳ ಹಿತ ಕಾಯುವ ಮೂಲಕ ಅನ್ನದಾತನ ಬದುಕಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಈ ದಂಧೆ ನಡೆಸುತ್ತಿರುವವರು ಕೃಷಿ ಯೋಗ್ಯ ಬಯಲು ಪ್ರದೇಶದ ಜಮೀನುಗಳನ್ನೇ ಆಯ್ಕೆ ಮಾಡಿಕೊಂಡು(ಚಿಪ್ಪು ಸುಡಲು)ಬಾಡಿಗೆಗೆ ಪಡೆದು ತಾಲೂಕಿನಾದ್ಯಂತ ನೂರಾರು ಕಡೆಗಳಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ.
ಕೃಷಿ ಭೂಮಿಯಲ್ಲಿ ದೊಡ್ಡ-ದೊಡ್ಡ ಗುಂಡಿಗಳನ್ನು ತೆಗೆದು ಕೊಬ್ಬರಿ-ಕಾಯಿ ಚಿಪ್ಪುಗಳನ್ನು ಲೋಡುಗಟ್ಟಲೆ ಸುರಿದು ಬೆಂಕಿ ಹಚ್ಚುತ್ತಿದ್ದು, ಈ ಗುಂಡಿಯಿಂದ ಭುಗಿಲೇಳುವ ದಟ್ಟ ಹೊಗೆ ನಿರಂತರ ಸ್ವಚ್ಛ ಪರಿಸರದ ಮತ್ತು ಕೃಷಿ ಭೂಮಿಯ ಸುತ್ತಮುತ್ತ ನೂರಾರು ಮೀಟರ್ ವಿಸ್ತಾರದಲ್ಲಿ ಹರಡಿಕೊಳ್ಳುತ್ತಿದೆ. ಹೀಗೆ ಹಬ್ಬಿದ ದಟ್ಟ ಹೊಗೆ ಗಾಳಿ ಬೀಸಿದಂತೆಲ್ಲಾ ರಸ್ತೆ, ಹೊಲ-ತೋಟಗಳಿಗೆಲ್ಲಾ ಸುತ್ತಿಕೊಳ್ಳುತ್ತಿದೆ. ಈ ಗುಂಡಿಗಳಿಂದ ಅತಿಯಾದ ಬಿಸಿಯಿರುವ ದಟ್ಟ ಹೊಗೆ ಹರಡಿ ಸುತ್ತಿಕೊಳ್ಳುವುದರಿಂದ ಗಿಡ ಮರಗಳು ಸುಟ್ಟ ರೋಗ ಬಂದಂತಾಗಿ ಕೃಷಿ ಮತ್ತು ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು, ಪಕ್ಷಿ ಸಂಕುಲ ನಾಶವಾಗಿ ಹೊಲ-ತೋಟಗಳ ಬೆಳೆಗಳ ಇಳುವರಿ ವಿಪರೀತವಾಗಿ ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಚಾರ.
ಮಾತ್ರವಲ್ಲ, ಅತಿಯಾದ ತಾಪಮಾನಕ್ಕೆ ಖುಷ್ಕಿ ಬೆಳೆಗಳಾದ ರಾಗಿ, ತೊಗರಿ, ಜೋಳ ಸೇರಿದಂತೆ ತೆಂಗು, ಅಡಿಕೆ ಮತ್ತು ಬಾಳೆಯಂಥ ತೋಟಗಾರಿಕೆ ಬೆಳೆಗಳು ನಾನಾ ರೋಗರುಜಿನಗಳಿಗೆ ಈಡಾಗಿ ರೈತನಿಗೆ ತೀವ್ರ ಹೊಡೆತ ಬೀಳುತ್ತಿರುವುದು ಆತಂಕಕಾರಿ ಸಂಗತಿ.
ವ್ಯವಸಾಯಕ್ಕೆಂದು ಬಳಕೆಯಲ್ಲಿರುವ ಪಂಪ್ಸ್‌ಟಟ್ಗಳಿಂದ ಅಕ್ರಮವಾಗಿ ಈ ಉದ್ಯಮಕ್ಕೆ ಯಥೇಚ್ಚವಾಗಿ ನೀರು ಉಪಯೋಗಿಸುತ್ತಿದ್ದು, ಈ ಬಗ್ಗೆ ಬೆಸ್ಕಾಂ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಎಲ್ಲಾ ಅಕ್ರಮ ತಾಲೂಕಿನ ಅಧಿಕಾರಿಗಳಿಗೆ ತಿಳಿದಿದ್ದರೂ ಚಿಪ್ಪು ಸುಡುವವರ ಆಮಿಷಕ್ಕೆ ಬಲಿಯಾಗಿ ತಾಲೂಕಿನಲ್ಲಿ ಈಗಾಗಲೇ ವಿನಾಶದಂಚಿಗೆ ತಲುಪಿರುವ ತೆಂಗು ಬೆಳೆ ಮತ್ತು ಕೃಷಿಗೆ ಮತ್ತಷ್ಟು ಹೊಡೆತ ನೀಡುವ ಕೆಲಸಕ್ಕೆ ಪರೋಕ್ಷವಾಗಿ ಕಂದಾಯ ಅಧಿಕಾರಿಗಳೇ ಬೆಂಬಲಿಸುತ್ತಿರುವುದು ನಾಚಿಕೆ ಪಡೆಬೇಕಾದ ಹಾಗೂ ಜಿಲ್ಲಾಡಳಿತ ಮತ್ತು ಸರ್ಕಾರ ತಲೆ ತಗ್ಗಿಸುಂತಾಗಿದೆ.
ಚಿಪ್ಪು ಸುಡುವ ವ್ಯವಹಾರ ದೊಡ್ಡ ಮಟ್ಟದ ಅಕ್ರಮ ಉದ್ಯಮವಾಗಿ ಬೆಳೆಯುತ್ತಿದ್ದು, ಹೆಚ್ಚಿನ ಲಾಭ ತರುತ್ತಿರುವ ಅಂತರ್‌ರಾಜ್ಯ ವ್ಯವಹಾರ ಆಗಿ ಮಾರ್ಪಡುತ್ತಿದೆ. ವಿಪರ್ಯಾಸವೆಂದರೆ ಪ್ರತಿಯೊಂದು ಉಧ್ಯಮ, ಕೈಗಾರಿಕೆಗಳಿಗೂ ಹತ್ತು ಹಲವು ಕಾಯ್ದೆ-ಕಾನೂನು ಜಾರಿಯಲ್ಲಿದ್ದರೂ ಕಂದಾಯ, ಪರಿಸರ ಮತ್ತು ಕೈಗಾರಿಕೆ ಇಲಾಖೆ ಮತ್ತು ತಾಲೂಕು, ಗ್ರಾಪಂ ಇಂತಹ ಅಕ್ರಮ ವ್ಯವಹಾರಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿರುವುದು ತಾಲೂಕು ಆಡಳಿತದ ವೈಫಲ್ಯ ಎತ್ತಿ ತೋರುತ್ತದೆ.
ಇನ್ನು ಮುಂದಾದರೂ ಜಿಲ್ಲಾಡಳತ ಹಾಗೂ ಜಿಲ್ಲಾಧಿಕಾರಿ,ಪರಿಸರ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಎಚ್ಚೆತ್ತು ಚಿಪ್ಪು ಸುಡುವ ಉದ್ಯಮಕ್ಕೆ ವೈಜ್ಞಾನಿಕ ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅವೈಜ್ಞಾನಿಕ ಮತ್ತು ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಸ್ಥಳೀಯರ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement