'ಜಾಣತನ ಅನಾವರಣಕ್ಕೆ ದೈಹಿಕ ಸಾಮರ್ಥ್ಯ ಅಗತ್ಯ'
ಕ.ಪ್ರ.ವಾರ್ತೆ ತುಮಕೂರು ಏ.25
ಪ್ರತಿ ಜೀವಿಗಳಿಗೂ ಉತ್ತಮ ದೈಹಿಕ ಸಾಮರ್ಥ್ಯ ಅಗತ್ಯವಿದ್ದು, ವಿಶೇಷವಾಗಿ ಮಾನವ ಜೀವಿಗೆ ತಮ್ಮ ಬೌದ್ಧಿಕ ಸಾಮರ್ಥ್ಯ ಅನಾವರಣಕ್ಕೆ ದೈಹಿಕ ಸಾಮರ್ಥ್ಯ ಬೇಕು ಎಂದು ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ ಆರ್. ಚೈತ್ರಾ ನುಡಿದರು. ಇಲ್ಲಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯವೇ ಇಲ್ಲದೆ ಕೇವಲ ಬುದ್ಧಿವಂತಿಕೆಯನ್ನು ಹೊಂದಿದ್ದಲ್ಲಿ ನಾವು ಸಾಧನೆಗಳನ್ನು ಸಾಕಾರಗೊಳಿಸಲಾಗದೇ ಅವು ಕೇವಲ ಕಾಗದದ ಮೇಲಿನ ಯೋಜನೆಗಳಾಗಿ ಉಳಿಯುತ್ತವೆ. ಆದ್ದರಿಂದ ಕ್ರೀಡೆಗಳು ಸಾಧನೆಗಳಿಗೆ ಕಾರಣವಾಗುತ್ತದೆ ಎಂದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲಿನಿಂದಲೂ ಹಲವಾರು ರಾಷ್ಟ್ರೀಯ ರಾಜ್ಯ, ವಲಯ ಮತ್ತು ವಿವಿ ಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದೆ ಎಂದು ಪ್ರಶಂಸಿಸಿದರು.
ಈಗಿನ ಅಂತರಕಾಲೇಜು ಕ್ರೀಡಾಕೂಟದಲ್ಲಿ 20 ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು ಭಾಗವಹಿಸಿದ್ದು ಉತ್ತಮ ಸೌಲಭ ಕಾಲೇಜಿನ ವತಿಯಿಂದ ಕೊಡಲಾಗುತ್ತಿದೆ ಎಂದರು.ಪ್ರಾಂಶುಪಾಲ ಡಾ.ಕೆ.ಸುಕುಮಾರನ್ ಮಾತನಾಡಿ, ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ತಮಿಳುನಾಡಿನ ತಂಜಾವೂರು ರಾಜಮನೆತನದವರು ಮೊದಲ ಬಾರಿಗೆ ರೂಪಿಸಿ ನಂತರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದೆ ಎಂದ ಅವರು ಭಾರತೀಯರು ಹೆಮ್ಮಪಡಬೇಕಾದ ವಿಷಯ ಎಂದರು.
ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡಿ ಶ್ರೇಷ್ಟ ತಂಡವಾಗಿ ಹೊರಹೊಮ್ಮಲು ಪ್ರಯತ್ನಪಡಲೆಂದು ಹಾರೈಸಿದರು. ಮೇಘನಾ ಮತ್ತು ಚಂದನಾ ಪ್ರಾರ್ಥಿಸಿ, ಉಪ ಪ್ರಾಂಶುಪಾಲ ಪ್ರೊ. ಚಂದ್ರಶೇಖರಯ್ಯ ಸ್ವಾಗತಿಸಿದರು.