ಮುಖ್ಯಾಧಿಕಾರಿ ಅಮಾನತ್ತಿಗೆ ಆಗ್ರಹ
ಕ.ಪ್ರ,ವಾರ್ತೆ ಕುಣಿಗಲ್ ಏ.26
ರಸ್ತೆ ವಿಷಯವಾಗಿ ಒಂದೇ ವಾರ್ಡಿನ ನಾಗರಿಕರು ಬಡಿದಾಡಿಕೊಳ್ಳಲು, ಪುರಸಭೆ ಮುಖ್ಯಾಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯೇ ಕಾರಣ ಎಂದು ಆರೋಪಿಸಿದ ಮಹಾವೀರನಗರ ಬಡಾವಣೆ ನಾಗರಿಕರು,ಪುರಸಭೆ ಸದಸ್ಯ ರಂಗಸ್ವಾಮಿ, ಮುಖಂಡರಾದ ಶಿವಣ್ಣ, ಅಶ್ವತ್ಥರಂಗ ನೇತೃತ್ವದಲ್ಲಿ ಪುರಸಭೆ ಮುಂಭಾಗದಲ್ಲಿ ಮುಖ್ಯಾಧಿಕಾರಿ ಅಮಾನತ್ತಿಗೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಶನಿವಾರ ತಾಲೂಕು ಕಚೇರಿ ಬಳಿ ಸಂಘಟಿತರಾದ ನಾಗರಿಕರು,ಪೊಲೀಸ್ ಠಾಣೆಗೆ ತೆರಳಿ, ಅಮಾಯಕರ ಮೇಲೆ ದಾಖಲಿಸಿರುವ ಪ್ರಕರಣ ಕೈ ಬಿಡುವಂತೆ ಆಗ್ರಹಿಸಿ, ಪೊಲೀಸ್ ಅಧಿಕಾರಿಗಳಿಗೆ ವಸ್ತುಸ್ಥಿತಿ
ಮನವರಿಕೆ ಮಾಡಿಕೊಟ್ಟು, ಸ್ಥಳದಲ್ಲಿ ಇಲ್ಲದವರ ಮೇಲೆ ದುರುದ್ದೇಶದಿಂದ ಕಟ್ಟಡ ಮಾಲೀಕರು ದೂರು ನೀಡಿದ್ದರು. ಗಂಭೀರ ಆರೋಪಗಳಡಿಯಲ್ಲಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಕೂಲಂಕಶ ತನಿಖೆ ನಡೆಸಿ ಅಮಾಯಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ ಅವರಲ್ಲಿ ಮನವಿ ಮಾಡಿದರು.
ಏಕಪಕ್ಷೀಯ ವರ್ತನೆ: ಅಧಿಕಾರಿಗಳು ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ, ನೇರವಾಗಿ ಪುರಸಭೆ ಕಾರ್ಯಾಲಯದ ಮುಂಭಾಗಕ್ಕೆ ಆಗಮಿಸಿ, ಮುಖ್ಯಾಧಿಕಾರಿಯವರ ಏಕಪಪಕ್ಷೀಯ ವರ್ತನೆಯಿಂದ ಶುಕ್ರವಾರ ಒಂದೇ ವಾರ್ಡಿನ ನಾಗರಿಕರು ಬಡಿದಾಡಿಕೊಳ್ಳುವಂತಾಗಿದ್ದು, ಅವರನ್ನು
ಅಮಾನತು ಮಾಡಿ, ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗಾಯಾಳು ಸಮೇತ ಧರಣಿ ಕುಳಿತರು. ಮುಖಂಡ ಶಿವಣ್ಣ ಮಾತನಾಡಿ, ಶುಕ್ರವಾರ ಬೆಳಗ್ಗೆ ಮುಖ್ಯಾಧಿಕಾರಿಗಳಿಗೆ ನ್ಯಾಯಾಲದಲ್ಲಿ ತಡೆಯಾಜ್ಞೆ ಇರುವ ಬಗ್ಗೆ
ಮನವರಿಕೆ ಮಾಡಿದ್ದರೂ, ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ, ಕಟ್ಟಡ ಮಾಲೀಕರ ಪರವಾಗಿ ಏಕಪಕ್ಷೀಯವಾಗಿ ವರ್ತಿಸಿದರು. ಅವರನ್ನು ನಾಗರಿಕರ ಮೇಲೆಎತ್ತಿಕಟ್ಟಿ ಗಲಭೆಗೆ ಕಾರಣರಾಗಿದ್ದಾರೆ. ಪುರಸಭೆ ನಿಯಮಾವಳಿಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಮೇಲಾಧಿಕಾರಿಗಳು ಕೂಡಲೆ ಕ್ರಮಕೈಗೊಂಡು ಅಮಾನತ್ತು ಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಆಗಮಿಸಿ, ಪ್ರತಿಭಟನಾಕಾರರ ಮನ ಒಲಿಸಲು ಯತ್ನಿಸಿದಾಗ, ಪುರಸಭೆ ಸದಸ್ಯ ರಂಗಸ್ವಾಮಿ, ಮುಖ್ಯಾಧಿಕಾರಿಯ ಅವೈಜ್ಞಾನಿಕ ಕ್ರಮದಿಂದ ಊರಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಅವರ ನಿರ್ಲಕ್ಷ್ಯ ಕ್ರಮದಿಂದ ಊರಿನಲ್ಲಿ ಮತ್ತಷ್ಟು ಗಲಭೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದರು.
ತಹಸೀಲ್ದಾರ್ ಶಂಭುಲಿಂಗಯ್ಯ, ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಸುದೀರ್ಘವಾಗಿ ಚರ್ಚಿಸಿ,ಅಹವಾಲು ಸ್ವೀಕರಿಸಿ, ಮುಂದಿನ 3 ದಿನಗಳೊಳಗೆ ಮುಖ್ಯಾಧಿಕಾರಿಗಳ ವಿರುದ್ಧ ಸಾಧ್ಯವಿರುವ ಕ್ರಮವನ್ನು ಮೇಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಮೂರು ದಿನದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು. ಪುರಸಭೆ ಸದಸ್ಯ
ಚಂದ್ರಶೇಖರ್, ರಾಮು, ಮಾಜಿ ಸದಸ್ಯೆ ಜಯಲಕ್ಷ್ಮಿ, ಪ್ರಮುಖರಾದ ಪಾರ್ಥ, ಶಿವು, ರೇಣುಕಪ್ಪ, ಮಂಜುನಾಥ, ನಾಗರಾಜ ಸೇರಿದಂತೆ ಇತರರು ಇದ್ದರು.