ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೈಲಿನಿಂದ ರೈತನ ಬಿಡಿಸುವ ಭರವಸೆ

Mainashree
Updated On : 29 Apr 2014, 12:21 pm

ಕ.ಪ್ರ. ವಾರ್ತೆ ್ಣ ತುರುವೇಕೆರೆ ್ಣ ಏ. 28
ಬ್ಯಾಂಕ್‌ನಿಂದ ಸಾಲ ಪಡೆದು ಹಿಂತಿರುಗಿಸಲು ವಿಫಲನಾಗಿದ್ದ ರೈತ ಜೈಲು ಪಾಲಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿಯನ್ನು ಬ್ಯಾಂಕಿನ ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಹಿಂದಕ್ಕೆ ಪಡೆಯಲಾಯಿತು.
ಸ್ಥಳೀಯ ಕರ್ಣಾಟಕ ಬ್ಯಾಂಕ್ ವತಿಯಿಂದ ತಾಲೂಕಿನ ಕುರುಬರಹಳ್ಳಿಯ ನಿವಾಸಿ ಶಿವರುದ್ರಯ್ಯ ಎಂಬುವವರು ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಬೆಳೆ ಹಾಗೂ ಟ್ರ್ಯಾಕ್ಟರ್ ಕೊಳ್ಳುವ ಸಲುವಾಗಿ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ನೀಡಿದ ಗಡುವು ಸಹ ಮುಗಿದಿತ್ತು. ಈ ಸಂಬಂಧ ಬ್ಯಾಂಕ್ ನ್ಯಾಯಾಲಯಕ್ಕೆ ಪ್ರಕರಣವನ್ನು ಕೊಂಡೊಯ್ದಿತ್ತು. ನ್ಯಾಯಾಲಯ ಸದರಿ ರೈತ ಶಿವರುದ್ರಯ್ಯ ನವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ಇದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಜೈಲ್ ಭರೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬ್ಯಾಂಕ್ ಮುಂಭಾಗವೇ ಶಾಮಿಯಾನ ಹಾಕಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಹಾಗೂ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬರದ ಬವಣೆಯಲ್ಲಿ ನಲುಗಿರುವ ರೈತರಿಗೆ ಸಾಲ ಮರುಪಾವತಿ ಮಾಡುವ ಚೈತನ್ಯವೇ ಬಿದ್ದು ಹೋಗಿದೆ. ಸರ್ಕಾರವೇ ಸಾಲ ಮರುಪಾವತಿ ಮಾಡಲು ಆಗದ ರೈತರ ನೆರವಿಗೆ ಬರುತ್ತಿದೆ. ಅಂತಹದರಲ್ಲಿ ಬ್ಯಾಂಕ್ ಸಾಲ ವಸೂಲು ಮಾಡಲು ಮುಂದಾಗಿ ರೈತರನ್ನು ಜೈಲಿಗೂ ಕಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ರೈತ ಮುಖಂಡರು ದೂರಿದರು. ನಬಾರ್ಡ್ ಯೋಜನೆಯಡಿ ರೈತರಿಗೆ ಹಲವಾರು ಯೋಜನೆಗಳು ಇದ್ದರೂ ಬ್ಯಾಂಕ್‌ಗಳು ರೈತರನ್ನು ವಂಚಿಸುತ್ತಿವೆ ಎಂದು ಕೆ.ಟಿ.ಗಂಗಾಧರ್ ಕಿಡಿಕಾರಿದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರೈತ ಶಿವರುದ್ರಯ್ಯ ನವರನ್ನು ಸ್ವತಃ ಬ್ಯಾಂಕ್ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳನ್ನು ಆಗ್ರಹಿಸಿದರು.
ಬಿಗಿ ಬಂದೋಬಸ್ತ್: ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾ ಕಾರ್ಯಕ್ರಮದ ವೇಳೆ ತಾಲೂಕು ಅಧ್ಯಕ್ಷ ಶ್ರೀನಿವಾಸ್‌ಗೌಡ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಳ ಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ರಾಮಸ್ವಾಮಿ, ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಮಧುಗಿರಿಯ ಶಂಕರಪ್ಪ, ಮೂಡಲಗಿರಯಪ್ಪ, ದೇವಿಹಳ್ಳಿ ರಾಮಕೃಷ್ಣ, ಹೊಡಿಕೇಘಟ್ಟ ರಾಮೇಗೌಡ, ಹಬುಕನಹಳ್ಳಿ ಬಸವರಾಜು ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement