ನಕ್ಸಲ್ ನಿಗ್ರಹ ದಳದ ನೈತಿಕ ಸ್ಥೆ ೈರ್ಯ ಕುಸಿತ
ಕನ್ನಡಪ್ರಭ ವಾರ್ತೆ, ತುಮಕೂರು, ಏ.28
ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ನೈತಿಕ ಸ್ಥೈರ್ಯ ಕುಸಿಯುವಂತಹ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ತನಿಕೋಡು ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎ.ಎನ್.ಎಫ್‌ನ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ. ಈ ಮೊದಲಿನಿಂದಲೂ ಸಮಾಜವನ್ನು ಒಡೆಯುವಂತಹ ಪಕ್ಷಪಾತಿ ಧೋರಣೆಗಳನ್ನು ತನ್ನ ಆಡಳಿತದಲ್ಲಿ ರೂಢಿಸಿಕೊಂಡಿದ್ದ ಕಾಂಗ್ರೆಸ್, ಈ ಪ್ರಕರಣದಲ್ಲೂ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ. ಅಪರಾಧಿಗಳಿಗೆ ಕುಮ್ಮಕ್ಕು ನೀಡುವಂತಹ ಹಾಗೂ ಕರ್ತವ್ಯನಿರತ ಪೊಲೀಸರು ಮತ್ತು ಎ.ಎನ್.ಎಫ್ ನ ನೈತಿಕ ಸ್ಥೈರ್ಯ ಕುಸಿಯುವಂತಹ ಕಾಂಗ್ರೆಸ್‌ನ ಈ ನಡೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ.
ಈ ಹಿಂದೆ ಅನೇಕ ಬಾರಿ ನಕ್ಸಲ್ ಕೃತ್ಯಗಳು ನಡೆದಿದ್ದ ಶಂೃಗೇರಿಯ ತನಿಕೋಡಿನಲ್ಲಿ ನಿಯೋಜನೆಯಾಗಿದ್ದ ಎಎನ್‌ಎಫ್ ಪಡೆಯ ಪೊಲೀಸರು, ರಾತ್ರಿ ವೇಳೆಯಲ್ಲಿ ಕದ್ದು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಬೀರ್ ಮತ್ತು ಸಂಗಡಿಗರ ವಾಹನವನ್ನು ನಿಲ್ಲಿಸಿ ತಪಾಸಣೆಗೊಳಪಡಿಸಲು ಪ್ರಯತ್ನಿಸಿದಾಗ ಕಾನೂನಿನ್ವಯ ತಪಾಸಣೆಗೊಳಪಡದೆ, ವಾಹನದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ, ಸೂಕ್ಷ್ಮ ಪರಿಸ್ಥಿತಿಯ ಅರಿವಿದ್ದ ನಕ್ಸಲ್ ನಿಗ್ರಹ ದಳದ ಪೊಲೀಸರು ಅನುಮಾನಗೊಂಡು ಗುಂಡು ಹಾರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಈ ಸಾಮಾನ್ಯ ಸಂಗತಿಯನ್ನು ಅರಿಯದ ಸರಕಾರ ಮೃತನ ಕೋಮಿನ ಆಧಾರದ ಮೇಲೆ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.
10 ಲಕ್ಷ ಪರಿಹಾರ: ಗುಲ್ಬರ್ಗದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದ ಇನ್‌ಸ್ಪೆಕ್ಟರ್ ಕುಟುಂಬಕ್ಕೆ ಬಿಜೆಪಿ ಮತ್ತು ಸಾರ್ವಜನಿಕರಿಂದ ಬಂದ ತೀವ್ರ ಒತ್ತಡದ ನಂತರ ಕೇವಲ 5 ಲಕ್ಷ ರು. ಪರಿಹಾರ ನೀಡಿದ ಕಾಂಗ್ರೆಸ್ ಸರಕಾರ, ಅಕ್ರಮವಾಗಿ ಗೋಸಾಗಾಣಿಕೆ ಮಾಡುತ್ತಿದ್ದ ಕಬೀರ್ ಕುಟುಂಬಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ಘಟನೆ ನಡೆದ ಕೂಡಲೇ ಅಲ್ಪಸಂಖ್ಯಾತನೆಂಬ ಕಾರಣದಿಂದ 10 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ಮತ್ತೋರ್ವ ಸಚಿವ ಯು.ಟಿ.ಖಾದರ್ ಅವರು ಕಬೀರ್ ಮತ್ತು ಸಂಗಡಿಗರ ಪರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಅವರ ಅಪರಾಧಗಳನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮರೆಮಾಚಿದೆ: ಗೋವುಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ, ಸಾಗಿಸುತ್ತಿದ್ದ ವ್ಯಕ್ತಿಗಳ ಮೇಲೆ, ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿತ್ತು ಎಂಬ ಸಂಗತಿಯನ್ನು ಕಾಂಗ್ರೆಸ್ ಸರಕಾರ ಮರೆಮಾಚಿದೆ. ಯಾವುದೇ ಪರವಾನಿಗೆಯಿಲ್ಲದೆ, ಸರಿ ರಾತ್ರಿಯಲ್ಲಿ, ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ, ಪೊಲೀಸರನ್ನು ಕಂಡ ಕೂಡಲೇ ಓಡಿ ಹೋಗಲು ಯತ್ನಿಸಿದ, ಕಬೀರ್ ಮತ್ತು ಸಂಗಡಿಗರ ಕೃತ್ಯಗಳ ಬಗ್ಗೆ ಇನ್ನಷ್ಟು ತನಿಖೆಯಾಗಬೇಕು. ಅಪರಾಧದ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಿಸಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು.
ಇಂತಹ ದುಷ್ಕೃತ್ಯಗಳನ್ನು ತಡೆಯುವ ಬಗ್ಗೆ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಪರಾಧಿಗಳ ನಿಗ್ರಹದಲ್ಲಿ ನಿರತವಾಗಿರುವ ಎ.ಎನ್.ಎಫ್ ಮತ್ತು ಪೊಲೀಸರಿಗೆ ನೈತಿಕ ಬಲ ತುಂಬಬೇಕು. ಜೊತೆಗೆ ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂಬ ಒತ್ತಾಯವನ್ನು ಬಿಜೆಪಿ ಮಾಡುತ್ತಿದ್ದು, ಅಪರಾಧಿಗಳನ್ನು ರಕ್ಷಿಸುವ, ಪ್ರೋತ್ಸಾಹ ನೀಡುವ ರೀತಿ ನೀತಿಗಳನ್ನು ಸರಕಾರ ಕೈಬಿಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ. ಸರಕಾರ ತನ್ನ ಈ ನಡೆಯನ್ನು ತಿದ್ದಿಕೊಳ್ಳದೆ ಇದ್ದಲ್ಲಿ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂಬ ಎಚ್ಚರಿಕೆಯನ್ನು ಬಿಜೆಪಿ ನೀಡುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್ ಗೌಡ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ. ಮಹೇಶ್, ಎಂ.ಬಿ. ನಂದೀಶ್, ಶಿವಪ್ರಸಾದ್ ಸೇರಿದಂತೆ ಇತರರು ವಹಿಸಿದ್ದರು.
ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಚು
ಸಚಿವ ರಮಾನಾಥ ರೈ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಸಂಘ ಪರಿವಾರವನ್ನು ಎಳೆದು ತರುವ ಮೂಲಕ ಅಲ್ಪಸಂಖ್ಯಾತರಲ್ಲಿ ಕೋಮುಭಾವನೆ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಚು ನಡೆಸಿದ್ದಾರೆ. ಗೋವುಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ತನ್ನೆಲ್ಲಾ ಹೇಳಿಕೆಗಳನ್ನು ಶಾಸಕ ಮೊಯಿದ್ದೀನ್ ಬಾವಾರವರ ಬಲವಂತದಿಂದ ನೀಡಿರುವುದಾಗಿ ಹೇಳಿಕೆಯಿತ್ತಿದ್ದಾನೆ.
ಈ ಪ್ರಕರಣದಲ್ಲಿ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದ, ಅಪರಾಧಿಗಳ ಮೇಲೆ ಗುಂಡು ಹಾರಿಸಿದ ಪೇದೆಯ ಮೇಲೆ ಸರಕಾರ ಕೊಲೆ ಪ್ರಕರಣ ದಾಖಲಿಸಿದೆ. ಇದರಿಂದ ಇಡೀ ರಾಜ್ಯ ಸರಕಾರ ಅಪರಾಧಿಗಳ ಬೆನ್ನಿಗೆ ನಿಂತಿರುವುದರ ಜೊತೆಗೆ, ಪೊಲೀಸರು ಒತ್ತಡದಿಂದ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸರಕಾರ ಅಪರಾಧಿಗಳಿಗೆ ನೀಡುತ್ತಿರುವ ಕುಮ್ಮಕ್ಕು, ಪೊಲೀಸರ ಮೇಲೆ ದಾಖಲಿಸುತ್ತಿರುವ ಕೇಸು ಮುಂತಾದ ಕ್ರಮಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ ಎಂದು ಜಿಲ್ಲಾ ಬಿಜೆಪಿ ದೂರಿದೆ.