ಮಳೆಗೆ ಹಾರಿ ಹೋದ ಶೀಟು, ಹೆಂಚು
ತುರುವೇಕೆರೆ: ಕೆಲ ಸಮಯವಷ್ಟೇ ಬೀಸಿದ ಗಾಳಿ, ಮಳೆಯ ಆರ್ಭಟಕ್ಕೆ ದಬ್ಬೆಘಟ್ಟ ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವಾರು ಮನೆಗಳ ಹೆಂಚುಗಳು, ಶೀಟ್‌ಗಳು ಹಾರಿ ಹೋಗಿವೆ.
ಪಟ್ಟಣದ ಸರಸ್ವತಿಪುರಂನ ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ ಕೆಲ ದಿನಗಳ ಹಿಂದೆಯಷ್ಟೇ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಭಾನುವಾರ ಬಂದ ಭಾರಿ ಬಿರುಗಾಳಿ ಸಹಿತ ಮಳೆಯಿಂದ ಮನೆಯ ಶೀಟುಗಳು ಹಾರಿ ಹೋಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಹಾಳಾಗಿವೆ. ಹೊಲಿಗೆ ಯಂತ್ರ, ಟಿವಿ ಇತ್ಯಾದಿ ವಸ್ತುಗಳಿಗೆ ಹಾನಿಯುಂಟಾಗಿದೆ. ಮನೆಯಲ್ಲಿದ್ದ ಭಾಗ್ಯಮ್ಮನವರ ತಲೆಗೂ ಪೆಟ್ಟು ಬಿದ್ದಿದೆ.
ರಾಘವೇಂದ್ರ ನಗರದ ಅಬಿದ್ ಎಂಬುವವರ ಗುಡಿಸಲು ಸಂಪೂರ್ಣ ನೆಲಕ್ಕುಳಿದೆ. ಅಬಿದ್ ಮೇಲೆ ಗುಡಿಸಲು ಬಿದ್ದ ಪರಿಣಾಮ ಅವರಿಗೆ ಪೆಟ್ಟು ಬಿದ್ದಿದೆ.
ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ರಾಘವೇಂದ್ರ ನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶೀಟ್‌ಗಳು ಹಾರಿ ಹೋಗಿವೆ. ಈ ಪ್ರದೇಶದ ಮರಿಹುಚ್ಚಯ್ಯ, ನಂಜುಂಡಯ್ಯ, ಉಮೇಶ್ ಎಂಬುವರ ಮನೆಗಳು ಹೆಂಚುಗಳು ಪುಡಿಪುಡಿಯಾಗಿವೆ.
ಮಿಲ್ ಉಮೇಶ್ ಹಾಗೂ ನಿಂಗಣ್ಣ ನವರ ಮನೆಗಳ ಹೆಂಚುಗಳೂ ಮಳೆ ಗಾಳಿಗೆ ಹಾರಿ ಹೋಗಿ ಕುಟುಂಬಕ್ಕೆ ತೀವ್ರ ತೊಂದರೆ ಆಗಿದೆ. ಸೂಳೆಕೆರೆಯ ರುದ್ರಯ್ಯ ಎಂಬುವವರ ಹೆಂಚಿನ ಮನೆಯ ಮೇಲೆ ಬೇವಿನ ಮರದ ದೊಡ್ಡ ಗಾತ್ರದ ಕೊಂಬೆ ಬಿದ್ದು ಮನೆಯ ಹಲವಾರು ಹೆಂಚುಗಳು ಮುರಿದು ಹೋಗಿವೆ.
ಅಗ್ನಿಶಾಮಕ ದಳ ಕಚೇರಿ ಆವರಣದಲ್ಲಿದ್ದ ಟಿಸಿ ಕಂಬ ಹಾಗೂ ಪಕ್ಕದ ಕಂಬದ ಮೇಲೆ ಮರ ಬಿದ್ದ ಪರಿಣಾಮ ಎರಡೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ದಾರಿಯುದ್ದಕ್ಕೂ ಹಲವಾರು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವುದರಿಂದ ಕಂಬಗಳೂ ಮುರಿದು ಹೋಗಿ ವಿದ್ಯುತ್ ಪ್ರಸರಣದಲ್ಲಿ ತೀವ್ರ ತೊಂದರೆಯಾಗಿದೆ. ದಬ್ಬೇಘಟ್ಟ ರಸ್ತೆಯ ಹಲವಾರು ಕಡೆಗಳಲ್ಲಿ ಭಾನುವಾರವೂ ವಿದ್ಯುತ್ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಮಳೆ ಹಾಗೂ ಗಾಳಿಯ ಆರ್ಭಟಕ್ಕೆ ಸಿಲುಕಿ ನಷ್ಟ ಉಂಟಾಗಿರುವ ವಾಹನ ಮಾಲೀಕರಿಗೆ, ಮನೆಗಳ ಮಾಲೀಕರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.