ಸ್ವಚ್ಛತೆಗೆ ಪೌರ ಕಾರ್ಮಿಕರ ಸಹಕಾರ ಅಗತ್ಯ
ಹುಳಿಯಾರು: ಯಾವುದೇ ಪಟ್ಟಣ ಸ್ವಚ್ಚವಾಗಿಡುವುದು ಆಯಾ ಪಂಚಾಯ್ತಿಯ ಪೌರಕಾರ್ಮಿಕರ ಕಾರ್ಯವಾಗಿದೆ. ಕೆಲಸದ ವಿಚಾರವಾಗಿ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಸೌಹಾರ್ಧಯುತವಾಗಿ ನಡೆದು ಕೊಳ್ಳುವ ಮೂಲಕ ಪಂಚಾಯ್ತಿಗೆ ಉತ್ತಮ ಹೆಸರು ತಂದು ಕೊಡಬೇಕೆಂದು ಕಾರ್ಯದರ್ಶಿ ಅಡವೀಶ್ಕುಮಾರ್ ತಿಳಿಸಿದರು.
ಪಟ್ಟಣ ಪಂಚಾಯ್ತಿಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು ಯಾವುದೇ ಕಾರಣಕ್ಕೂ ನೀರು ಸರಬರಾಜಿನಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ನೀರು ವಿತರಕರಿಗೆ ಸೂಚಿಸಿದರು.
ವಾಟರ್ಟ್ಯಾಂಕ್, ಸಿಸ್ಟನ್ ತೊಳೆಯುವುದು, ಬೋರ್ವೆಲ್, ಪೈಪ್ಲೈನ್ ರಿಪೇರಿ ಕೆಲಸಗಳನ್ನು ನಿರ್ವಹಿಸುವುದು ನಿಮ್ಮಗಳ ಜವಾಬ್ದಾರಿ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ನಿಮ್ಮನ್ನೆ ಗುರಿಯಾಗಿಸುವುದಾಗಿ ಎಚ್ಚರಿಸಿದರು. ಪೌರ ಕಾರ್ಮಿಕರು ತಮಗೆ ವಹಿಸಿದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದಾಗ ಮಾತ್ರ ಪಟ್ಟಣ ಸ್ವಚ್ಚವಾಗಿರುತ್ತದೆ ಎಂದ ಅವರು, ಅಧಿಕಾರಿಗಳು ಕೇಳಿದಾಗ ಅಲ್ಲಿ, ಇಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಾಜರಿ ಹಾಕಿಸುವ ಬದಲು ಪ್ರತಿ ದಿನ ಕಚೇರಿಗೆ ಬಂದು ಸಹಿ ಪುಸ್ತಕದಲ್ಲಿ ತಮ್ಮ ಹಾಜರಾತಿ ಹಾಕುವುದು ಕಡ್ಡಾಯ ಎಂದು ತಿಳಿಸಿದರು.
ಪ್ರತಿ ದಿನ ಮುಂಜಾನೆ 5 ರಿಂದ 8 ಗಂಟೆವರೆಗೆ ಬಸ್ನಿಲ್ದಾಣ ಸೇರಿದಂತೆ ಪಟ್ಟಣ ಬೀದಿಗಳ ಕಸ ಗುಡಿಸಿ ತೆರವು ಗೊಳಿಸಬೇಕು. ನಂತರ 10 ರಿಂದ 3 ಗಂಟೆವರೆಗೆ ಪಟ್ಟಣದ ಚರಂಡಿಗಳನ್ನು ಸ್ವಚ್ಚ ಮಾಡುವ ಕಾರ್ಯ ಮಾಡಬೇಕಿದ್ದು, ಪೌರಕಾರ್ಮಿಕರು ಗೊತ್ತು ಮಾಡಿರುವ ಸಮವಸ್ತ್ರವನ್ನು ಕೆಲಸದ ಅವಧಿಯಲ್ಲಿ ಧರಿಸಬೇಕೆಂದು ಸೂಚಿಸಿದರು. ಎಲ್ಲಾ ಪೌರಕಾರ್ಮಿಕರಿಗೆ ಜೀವವಿಮೆ ಮಾಡಿಸಿದ್ದು ಅವರ ವೇತನದಲ್ಲಿ ಪ್ರಿಮೀಯಂ ಕಡಿತ ಆಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಪೌರ ಕಾರ್ಮಿಕರು ಚರಂಡಿ ಸ್ವಚ್ಚತೆಗೆ ಹೋದಾಗ ಮನೆಯವರು ಗಲಾಟೆ ಮಾಡುವ ಬದಲು ಸಹಕರಿಸಬೇಕು. ಪಂಚಾಯ್ತಿಯಿಂದ ಕೊಟ್ಟಿರುವ ಹ್ಯಾಂಡ್ ಗ್ಲೌಸ್ ಇತ್ಯಾದಿ ಶಿಥಿಲವಾಗಿದ್ದು ಹೊಸದನ್ನು ಕೊಡಬೇಕು ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದರೆ ನಮ್ಮ ಹತ್ತಿರವೂ ಹಣ ಕೇಳುತ್ತಾರೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳು ಆಸ್ಪತ್ರೆ ವೈದ್ಯರಿಗೆ ತಿಳಿಸಬೇಕಿದೆ ಎಂದರು. ಅಧ್ಯಕ್ಷೆ ಪುಟ್ಟಿಬಾಯಿ, ಪೌರಕಾರ್ಮಿಕರು ಉಪಸ್ಥಿತರಿದ್ದರು.