ಮುಖ್ಯಾಧಿಕಾರಿಗೆ ಕಿರುಕುಳ: ತಹಸೀಲ್ದಾರ್‌ಗೆ ಮನವಿ
ಕುಣಿಗಲ್: ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗೆ ವಿನಾಕಾರಣ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಪರ ಸಂಘಟನೆ ಮುಖಂಡರು, ಡಾ.ಅಂಬರೀಷ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಸೇರಿದಂತೆ ಮತ್ತಿತರರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಅನ್ನದಾನಿ ದಲಿತ ಜನಾಂಗದವರಾಗಿದ್ದು, ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರಿ ಮತ್ತು ಜಾತಿವಾದಿಗಳಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ವಿವಾದಗಳನ್ನು ಸೃಷ್ಟಿಸಿ, ಸುಳ್ಳು ಆರೋಪ ಮಾಡಿ, ರಾಜಕೀಯ ಕುತಂತ್ರದಿಂದ ಮೂರು ಬಾರಿ ವರ್ಗಾವಣೆ ಮಾಡಿದರೂ, ಆರೋಪಗಳು ಸಾಬೀತಾಗದ ಕಾರಣ ನಾಲ್ಕನೇ ಬಾರಿ ಸರ್ಕಾರ ಮತ್ತೆ ಅವರನ್ನೇ ಮುಖ್ಯಾಧಿಕಾರಿಯಾಗಿ ಮಾಡಿದೆ. ಈ ಮಧ್ಯೆ ಈಚೆಗೆ ಪಟ್ಟಣದ 13ನೇ ವಾರ್ಡ್‌ನಲ್ಲಿ ನಡೆದ ಬಡಿದಾಟಕ್ಕೆ ಮುಖ್ಯಾಧಿಕಾರಿಯಯನ್ನೇ ಹೊಣೆಗಾರರನ್ನಾಗಿ ಮಾಡಿರುವುದು ಸರಿಯಲ್ಲ. ಅನ್ನದಾನಿಯರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಅಗ್ರಹಿಸಿದ್ದಾರೆ. ನಿಯೋಗದಲ್ಲಿ ತುಮಕೂರು ಜಿಲ್ಲಾ ಡಾ.ಅಂಬರೀಷ್ ಅಭಿಮಾನಿ ಸಂಘದ ಅಧ್ಯಕ್ಷ ಕೆ.ಟಿ.ನಾಗೇಶ್, ದಲಿತ ಮುಖಂಡರಾದ ಎನ್.ರಾಜೇಶ,ಲಕ್ಷ್ಮೀನಾರಾಯಣ, 19ನೇ ವಾರ್ಡ್ ಸದಸ್ಯ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.