ರಾಮ್‌ದೇವ್ ಹೇಳಿಕೆ ಖಂಡಿಸಿ ಹಲವೆಡೆ ಪ್ರತಿಭಟನೆ
ಶಿರಾ: ಬಾಬಾ ರಾಮ್‌ದೇವ್ ಹೇಳಿಕೆ ಖಂಡಿಸಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ತಾಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದವು. ದಲಿತರಿಗೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಬಾಬಾ ರಾಮ್‌ದೇವ್‌ಗೆ ಬುದ್ಧಿಭ್ರಮಣೆಯಾಗಿದ್ದು. ರಾಜಕೀಯ ಇಚ್ಛಾಶಕ್ತಿ ಇದ್ದರೆ ರಾಜಕೀಯ ಸೇರಿ ಕಾವಿ ತೆಗೆದು ಚುನಾವಣೆಗೆ ಸ್ಪರ್ಧಿಸಲಿ ದಲಿತರ ಕೇರಿಗಳು ಅಂದರೆ ರಾಮ್‌ದೇವ್ ಏನೆಂದು ತಿಳಿದುಕೊಂಡಿದ್ದಾರೆ. ಯೋಗದ ಹೆಸರಿನಲ್ಲಿ ಕೋಟ್ಯಂತರ ಹಣ ಮಾಡಿ ಐಷರಾಮಿ ಜೀವನ ಮಾಡುತ್ತಿರುವ ರಾಮ್‌ದೇವ್‌ಗೆ ಮೂಲ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇದ್ದರೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ದಸಂಸ ಎಚ್ಚರಿಸಿದೆ. ನಗರದ ಪ್ರವಾಸಿ ಮಂದಿರ ವೃತ್ತದಿಂದ ಪ್ರತಿಭಟನೆ ಮಾಡಿದ ದಸಂಸ ಕಾರ್ಯಕರ್ತರು ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ನಗರಸಭಾ ಸದಸ್ಯ ಬಸವರಾಜು, ಲಕ್ಷ್ಮೀಕಾಂತ್, ಟಿ.ಲೋಕೇಶ್ ಇದ್ದರು.
ಬಂಧನಕ್ಕೆ ಆಗ್ರಹ
ಶಿರಾ: ಬಾಬಾ ರಾಮ್‌ದೇವ್ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಅವರನ್ನು ಗಡಿಪಾರು ಮಾಡಬೇಕು ಹಾಗೂ ಕಾನೂನಿನಡಿ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ಬಾಬಾ ರಾಮ್‌ದೇವ್ ಒಬ್ಬ ಅವಿವೇಕಿ ಯೋಗಗುರು. ಅವರು ನೀಡಿರುವ ಹೇಳಿಕೆಯಿಂದ ಇಡೀ ದಲಿತ ಸಮುದಾಯಕ್ಕೆ ಅಪಮಾನವಾಗಿದೆ ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳಬೇಕು ಎಂದು ಯೋಗಾನಂದ್ ಆಗ್ರಹಿಸಿದ್ದಾರೆ.
ದಲಿತ ಸಂಘಟನೆಗಳ ಧರಣಿ; ಪ್ರತಿಕೃತಿ ದಹನ
ಪಾವಗಡ: ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಮಂಗಳವಾರ ಇಲ್ಲಿನ ದಲಿತರ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ದೇವಸ್ಥಾನ ವೃತ್ತದ ಬಳಿ ಯೋಗಗುರು ರಾಮ್‌ದೇವ್ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ವಿಮೋಚನೆ ಸೇನೆ ಅಧ್ಯಕ್ಷ ವಿರೂಪಸಮುದ್ರ ರಾಮಾಂಜಿನಪ್ಪ ಮಾತನಾಡಿ, ಪ್ರಚಾರದ ಸೋಗಿನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ದಲಿತ ಕಾಲೋನಿಗಳಿಗೆ ಭೇಟಿ ಮಾಡಿ ಅಲ್ಲಿನ ಮಹಿಳೆಯರ ಜೊತೆ ಹನಿಮುನ್ ಮಾಡುತ್ತಾರೆ ಎಂದು ರಾಮ್‌ದೇವ್ ಅವರ ಹೇಳಿಕೆ ನೀಡಿ ಅಲ್ಲಿ ವಾಸವಾಗಿರುವ ಎಸ್‌ಸಿ, ಎಸ್‌ಟಿ, ಜನಾಂಗಗಳ ಹೆಣ್ಣು ಮಕ್ಕಳನ್ನು ಅವಮಾನಪಡಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ಕಾನೂನು ಕ್ರಮಕ್ಕೆ ಒತ್ತಾಯ: ದಲಿತರ ಬಗ್ಗೆ ಅವಹೇಳನ ಮಾಡಿರುವುದನ್ನು ದಲಿತ ಪರ ಸಂಘಟನೆಗಳು ಖಂಡಿಸಿದ್ದು ರಾಮ್‌ದೇವ್ ವಿರುದ್ಧ ಕಾನೂನು ರೀತ್ಯ ಕ್ರಮ ಜರಿಗಿಸಿ ಗಡಿ ಪಾರು ಮಾಡಬೇಕೆಂದ ಅವರು ದಲಿತರು ವಾಸವಾಗಿರುವ ಯಾವುದೇ ರಾಜ್ಯಕ್ಕೆ ಅವರ ಪ್ರವೇಶ ಮಾಡದಂತೆ ನಿಷೇಧಿಸಬೇಕು ಎಂದು ಓತ್ತಾಯಿಸಿದರು.
ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ ತಾಲೂಕು ಡಿಎಸ್‌ಎಸ್ ಸಂಚಾಲಕ ಬಿ.ಪಿ.ಪೆದ್ದಣ್ಣ, ಡಿಜೆಎಸ್ ಸಂಚಾಲಕ ನಾರಾಯಣಪ್ಪ, ದಂಡೋರ ಅಧ್ಯಕ್ಷ ನಾಗೇಶ್, ಹನುಮಂತನಹಳ್ಳಿ ರಮೇಶ್, ತಮಟೆ ಸಂಸ್ಥೆ ಸುಬ್ಬರಾಯಪ್ಪ, ಹನುಮಂತರಾಯ ಜೀವಿಕ ಸಂಚಾಲಕ ಬಳಸಮುದ್ರ ವೆಂಕಟೇಶ್, ದಲಿತ ವಿಮೋಚನೆ ಸೇನೆ ಕಾರ್ಯದರ್ಶಿ ವೈ.ಎನ್.ಹಳ್ಳಿ ಶಿವಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.