'ಧನದಿಂದಲೇ ಎಲ್ಲ ಎಂಬ ಭಾವ ಸಲ್ಲ'
ತುಮಕೂರು: ನಮ್ಮೆಲ್ಲರ ದೈನಂದಿನ ವ್ಯವಹಾರಿಕತೆ ನೈತಿಕತೆಯನ್ನು ನಂಬುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಕೆ.ಆರ್. ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ಶಂಕರ ಭಗವತ್ಪಾದ ಸಂಸ್ಮರಣಂ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.
ಮಾನವನು ಹಣದಿಂದಲೇ ಎಲ್ಲವನ್ನು ಪಡೆಯಬಹುದೆಂಬ ವಿಕೃತ ಭಾವವನ್ನು ತಾಳಿದಾಗ ದೇವರು ಮತ್ತು ಧರ್ಮದ ತಿಳುವಳಿಕೆ ಕಡಿಮೆಯಾಗಿ ಅವನು ಲೋಭಿಯಾಗುತ್ತಾನೆ, ಅದ್ದರಿಂದ ಅರ್ಥ ಮತ್ತು ಕಾಮಗಳು ಮನುಷ್ಯನ ಅವಶ್ಯಕತೆಗಳೇ ಎಂದೆನಿಸಿದರೂ, ಇದು ಧರ್ಮದ ಎಲ್ಲೆಯನ್ನು ಮೀರಬಾರದು. ಧರ್ಮವನ್ನು ಮರೆತಾಗ ಅದು ವ್ಯಾವಹಾರಿಕತೆಯನ್ನು ಹೆಚ್ಚಿಸಿ ಸ್ವಾರ್ಥ ಸಾಧನೆಗೆ ಪ್ರಲೋಭನೆ ನೀಡಿ ನೈತಿಕ ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಮಾನವನ ಅಲೋಚನೆಗಳು ಮತ್ತು ನಡುವಳಿಕೆಗಳನ್ನು ಅತ್ಮಸಾಕ್ಷಿಗೆ ಮಣಿಯುವಂತೆ ಮಾಡುವ ತಾಕತ್ತು ಧರ್ಮಕ್ಕಿದೆ. ವ್ಯಕ್ತಿ ಮತ್ತು ಸಮಾಜದ ಹಿತಗಳ ನಡುವೆ ಸಮನ್ವಯ ಸಾಧಿಸಲು ಧರ್ಮ ಒಂದೇ ಏಕೈಕ ಮಾರ್ಗವಾಗಿದೆ. ಏಕೆಂದರೆ, ಧರ್ಮವು ವಿಶಾಲವು ಹಾಗೂ ಜಾಗತಿಕವೂ ಆದ ಚಿಂತನೆಯಾಗಿದೆ ಮತ್ತು ನೈಜ ಧರ್ಮವು ಎಂದೆಂದೂ ಜನ್ಮಗತ ಅಸಮಾನತೆ ಮತ್ತು ಅರ್ಥಗತ ಅಸಮಾನತೆಯನ್ನು ಬೆಂಬಲಿಸುವುದಿಲ್ಲ. ಅಲ್ಲದೇ ಶೀರೋತ್ಕರ್ಷವೇ ಸುವ್ಯವಸ್ಥಿತ ಸಮಾಜದ ಅಧಾರ ಸ್ತಂಭ ಎಂಬುದನ್ನು ನೆನಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಬ್ರಾಹ್ಮಣ ಸಭಾದ ಉಪಾಧ್ಯಕ್ಷೆ ಸುಭಾಷಿಣಿ ರವೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಶಂಕರ ತತ್ವ ಪ್ರಚಾರ ಅಭಿಯಾನಂನ ರಾಜ್ಯ ಮತ್ತು ಜಿಲ್ಲಾ ಸಂಚಾಲಕ ಎಂ. ಕೆ. ನಾಗರಾಜರಾವ್ ಮತ್ತು ಶಂಕರಾದ್ವೈತ ಸೇವಾ ಟ್ರಸ್ಟ್ನ ಅಧ್ಯಕ್ಷ ಕಲ್ಲೂರು ಸುಬ್ಬಣ್ಣನವರು ಮತ್ತು ಟ್ರಸ್ಟಿ ಸಿ. ಫಣೀಶ್ ಅವರು ಉಪಸ್ಥಿತರಿದ್ದರು.