ವಿದ್ಯಾರ್ಥಿ ವೃಂದ ವೈವಿಧ್ಯಮಯ ಕಲಾಸಿರಿವಂತಿಕೆಗೆ ವೇದಿಕೆ ಅಗತ್ಯ
ಕ.ಪ್ರ.ವಾರ್ತೆ ತುಮಕೂರು ಏ.30
ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ರೀತಿಯ ಕಲಾಸಿರಿವಂತಿಕೆಯಿರುತ್ತದೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಕಾಲೇಜಿನಲ್ಲಿ ಸೂಕ್ತ ವೇದಿಕೆಯನ್ನು ಕಲ್ಪಿಸಿದಾಗ ಅವರಲ್ಲಿರುವ ಪ್ರತಿಭೆ ಪ್ರದರ್ಶನಗೊಳ್ಳುವುದರ ಜೊತೆಗೆ ಕ್ರಿಯಾತ್ಮಕವಾಗುತ್ತಾರೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಬಯಲು ವೇದಿಕೆಯಲ್ಲಿ ಏರ್ಪಟ್ಟ ಕಲೋತ್ಸವ-2014 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಲಾ ಪ್ರತಿಭೆಗಳಿಗೆ ಕ್ಯಾಂಪಸ್ನಲ್ಲಿ ವೇದಿಕೆ ಸಿಕ್ಕಾಗ ಅವರ ಮನಸ್ಸು ವಿಕಸಗೊಳ್ಳುತ್ತದೆ ಎಂದರು.
ಕಲೋತ್ಸವದಂತಹ ಕಾರ್ಯಕ್ರಮದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪಾಠ-ಪ್ರವಚನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರ ಮನಸ್ಸಿಗೆ ಮುದ ನೀಡುತ್ತದೆ ಎಂದು ಪರಮೇಶ್ವರ್ ಹೇಳಿದರು. ನಟ ನೀನಾಸಂ ಸತೀಶ್, ಸಂಗೀತ ನಿರ್ದೇಶಕ ಅನೂಪ್ ಸಲೀಂ ಮತ್ತು ಸಿನಿಮಾ ನಿರ್ದೇಶಕ ಅರಸು ಅಂತಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ರಾಜಣ್ಣ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ
ಪ್ರೊ.ಸಿ ಎನ್. ನರಸಿಂಹಮೂರ್ತಿ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಎ. ಕೃಷ್ಣಮೂರ್ತಿ, ಉಪಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ, ಡೀನ್ ಎಂ.ಝಡ್. ಕುರಿಯನ್, ಕಲೋತ್ಸವದ ಸಂಚಾಲಕರಾದ ಡಾ.ರಮೇಶ್, ಡಾ.ರಾಜೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ಕಾಲೇಜು ವಿದ್ಯಾರ್ಥಿಗಳ ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಿದವು. ಸಂಸ್ಥೆಯ ಮಹಿಳಾ ಅಧ್ಯಾಪಕರು ನಡೆಸಿಕೊಟ್ಟ ಪ್ಯಾಷನ್ ಶೋ ಗಮನ ಸೆಳೆಯಿತು.
ಕುಣಿಗಲ್ ಏ.30
ತಾಲೂಕಿನಾದ್ಯಂತ ಇರುವ ವಿವಿಧ ವರ್ಗದ ಸಾವಿರಾರು ಕಾರ್ಮಿಕರ ಪಾಲಿಗೆ, ಕಾರ್ಮಿಕರ ನಿರೀಕ್ಷಕರ ಕಚೇರಿ ನೆಪಮಾತ್ರಕ್ಕೆ ಇದ್ದು, ಇಲಾಖೆ ವಿವಿಧ ವರ್ಗದ ಕಾರ್ಮಿಕರ ಕಲ್ಯಾಣಕ್ಕೆ ಅನುಷ್ಠಾನಗೊಳಿಸಿರುವ ಯೋಜನೆಗಳು ಕೇವಲ ಕಾಗದಲ್ಲೆ ಉಳಿಯುವಂತಾಗಿದೆ ಎಂದು ಕಾರ್ಮಿಕ ಮುಖಂಡರು, ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಆರೋಪಸಿದ್ದಾರೆ.
ತಾಲೂಕಿನಾದ್ಯಂತ ಕಟ್ಟಡ ಕಾರ್ಮಿಕರು, ಬಣ್ಣಕೆಲಸ ಮಾಡುವ ಕಾರ್ಮಿಕರು, ಗಾರ್ಮೆಂಟ್ ಕೆಲಸಕ್ಕೆ ಹೋಗುವ, ಪ್ಯಾಕಿಂಗ್ ಕೆಲಸಕ್ಕೆ ಹೋಗುವ, ಟೈಲರಿಂಗ್ ಕೆಲಸ ಮಾಡುವ, ಬಾರ್ ಬೆಂಡಿಂಗ್ ಮಾಡುವುದು,ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸಮಾಡುವುದು ಸೇರಿದಂತೆ ವಿವಿಧ ವರ್ಗದ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಪಟ್ಟಣ ಪ್ರದೇಶ ಸೇರಿದಂತೆ ತಾಲೂಕಿನಾದ್ಯಂತ ಪ್ಲೈವುಡ್, ಇಟ್ಟಿಗೆ, ಕೆಲ ರಸಾಯನಿಕ ಘಟಕಗಳು ಹೆಚ್ಚಾದಂತೆ ಬಿಹಾರ, ಅಸ್ಸಾಂ, ಜಾರ್ಖಂಡ್, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ವಲಸೆ ಕಾರ್ಮಿಕರು ಕೆಲಸಮಾಡುವುದು ಹೆಚ್ಚಾಗುತ್ತಿದೆ. ವಿವಿಧ ವರ್ಗದ ಕಾರ್ಮಿಕರಿಗಾಗಿ ಸರ್ಕಾರವು ಕಾರ್ಮಿಕ ಇಲಾಖೆ ಮೂಲಕ ಹಲವು ಉಪಯೋಗಿ ಯೋಜನೆಗಳನ್ನು ರೂಪಿಸಿದ್ದಾರೆ.
ತಾಲೂಕಿನಾದ್ಯಂತ ಇರುವ ವಿವಿಧ ವರ್ಗದ ಕಾರ್ಮಿಕರಿಗೆ ಇಲಾಖೆ ಯೋಜನೆ ತಲುಪಿಸುವ ಹೊಣೆ ಕಾರ್ಮಿಕ ನಿರೀಕ್ಷಕರದ್ದಾಗಿದೆ. ಈ ಮೊದಲು ಪಟ್ಟಣದ ಮುಖ್ಯರಸ್ತೆಯ ಕಲ್ಲುಬಿಲ್ಡಿಂಗ್ನಲ್ಲಿದ್ದ ಕಚೇರಿಯನ್ನು
ತಾಲೂಕು ಕಚೇರಿ ಹಿಂಭಾಗಕ್ಕೆ ಸ್ಥಳಾಂತರಿಸಿರುವ ಕಾರಣ, ಬಹುತೇಕ ಕಾರ್ಮಿಕರಿಗೆ ಇಲ್ಲಿ ಕಚೇರಿ ಇರುವುದೆ ಗೊತ್ತಿಲ್ಲ. ಅಲ್ಲದೆ, ಇದೇ ಕಾರ್ಮಿಕ ನಿರೀಕ್ಷಕರನ್ನು ತುರುವೆಕೆರೆ ತಾಲೂಕಿಗೂ ನಿಯೋಜಿಸಿರುವುದರಿಂದ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸುವುದೇ ತ್ರಾಸದಾಯಕವಾಗಿದೆ. ಖಾಸಗಿ ಕಟ್ಟಡದಲ್ಲಿ ಮಹಡಿಮೇಲಿನ ಕೊಠಡಿಯಲ್ಲಿ ಕಚೇರಿ ಮಾಡಿಕೊಂಡಿರುವ ಕಾರ್ಮಿಕ ನಿರೀಕ್ಷಕರು, ಕೊಠಡಿಯ ಕಿಟಕಿಬಾಗಿಲು ತೆಗೆದ್ದಿದ್ದರೆ, ಸಾಹೆಬರು ಇದ್ದಾರೆಂದು, ಮುಚ್ಚಿದರೆ ಇಲ್ಲವೆಂಬ ಸಂದೇಶ ಜನನಿಜನಿತವಾಗಿದೆ.
ದೂರು: ಇನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ತುರುವೆಕೆರೆಯಲ್ಲಿದ್ದಾರೆಂಬ ಉತ್ತರ ದೊರೆತರೆ, ಅಲ್ಲಿಯವರು ಸಂಪರ್ಕಿಸಿದರೆ ಕುಣಿಗಲ್ನಲ್ಲಿದ್ದಾರೆಂಬ ಉತ್ತರವಾದರೆ, ಸಾಹೇಬರು ಕೈಗೆ ಸಿಕ್ಕಾಗ ಮಾತ್ರವೆ ಇಲಾಖೆ ಮಾಹಿತಿ ತಿಳಿಯುತ್ತೆ ಸಾರ್ ಎಂದು ಕರವೇ ಕಾರ್ಮಿಕ ಘಟಕದ ಪದಾಧಿಕಾರಿ ಶ್ರೀನಿವಾಸ್ ದೂರುತ್ತಾರೆ. ಕಾರ್ಮಿಕ ಇಲಾಖೆಯಿಂದ ಕೈಗಾರಿಕೆ ಪ್ರದೇಶದಲ್ಲಿ ರಾಜ್ಯ,
ಕೇಂದ್ರಸರ್ಕಾರದ ಯೋಜನೆಗಳ ಬಗ್ಗೆಯಾಗಲಿ, ಕಾರ್ಮಿಕರ ಮಕ್ಕಳಿಗೆ ದೊರಕುವ ಸವಲತ್ತುಗಳ ಬಗ್ಗೆಯಾಗಲಿ ಯಾವುದೇ ಕಾರ್ಯಕ್ರಮ ಆಯೋಜಿಸಿ, ಮಾಹಿತಿ ನೀಡಿಲ್ಲವೆಂದು ಆರೋಪಿಸಿದರೆ, ಕಟ್ಟಡಕಾರ್ಮಿಕರ ಮುಖಂಡ ದಿನೇಶ್, ಕಾರ್ಮಿಕ ನಿರೀಕ್ಷಕರಿಗೆ ಬೇಕಾದ ಕೆಲವೇ ಕೆಲ ವ್ಯಕ್ತಿಗಳನ್ನು ಸಂಪರ್ಕಿಸಿದರೆ ಮಾತ್ರ ಇಲಾಖೆಯ ಸವಲತ್ತು ದೊರಕುತ್ತದೆ.
ಸಮರ್ಪಕ ಮಾಹಿತಿ ಇಲ್ಲ: ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯಿಂದ ಕಾರ್ಮಿಕ ನಿಧನ ಹೊಂದಿದಲ್ಲಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಪಡೆಯಲು ಕಚೇರಿಗೆ ಹಲವು ಬಾರಿ ಸುತ್ತಿದರೂ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ಜೊತೆಯಲ್ಲಿ ಸದುಪಯೋಗ ಸಿಗುತ್ತಿಲ್ಲ. ಬೇರೆರಾಜ್ಯದಿಂದ ವಲಸೆ ಬಂದಂತಹ ಕಾರ್ಮಿಕರ ರಕ್ಷಣೆಗೆ ವಲಸೆಕಾರ್ಮಿಕ ಕಾಯಿದೆ ಇದ್ದರೂ, ಇಂದಿಗೂ ತಾಲೂಕಿನ ಹಲವು ಮರಸಂಸ್ಕರಣ, ಇಟ್ಟಿಗೆ ಘಟಕಗಳಲ್ಲಿ ವಲಸೆ ಕಾರ್ಮಿಕರನ್ನು ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ.ಪ್ಯಾಕೇಜಿಂಗ್ ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ನಿರೀಕ್ಷಕರ ಹೊಣೆಯಾಗಿದೆ. ಆದರೆ, ಕಾರ್ಮಿಕಇಲಾಖಾಧಿಕಾರಿಗಳು ಗಮನ ಹರಿಸದಿರುವುದು ನಿಜಕ್ಕೂ ತಾಲೂಕಿನಲ್ಲಿ ಇಲಾಖೆಯು ಕಾರ್ಮಿಕರ ಹಿತರಕ್ಷಣೆಗೆ ಶ್ರಮಿಸುತ್ತಿದೆಯೆ ಎಂಬ ಅನುಮಾನ ಮೂಡುತ್ತಿದೆ. ಕಾರ್ಮಿಕರಿಗೆ ದೊರಕಬೇಕಾದ ಸವಲತ್ತು ದೊರಕಿಸಲು ಕಾರ್ಮಿಕ ನಿರೀಕ್ಷಕರು ವಿಫಲವಾಗಿದ್ದು, ಸಿಬ್ಬಂದಿ ಕೊರತೆ ನೆಪದಲ್ಲಿ ಜಾರಿಕೊಳ್ಳುತ್ತಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಕೊಡೊಲ್ಲ ಎಂಬತಾಗಿದ್ದು, ಇನ್ನಾದರೂ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳು ಎಚ್ಚೆತ್ತು ಸರ್ಕಾರದ ಯೋಜನೆಗಳು ಎಲ್ಲಾ ವರ್ಗದ ಕಾರ್ಮಿಕರಿಗೆ ಸಿಗುವಂತಾಗಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.