ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿಗೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

Rashmi Kasaragodu
Updated On : 2 Aug 2014, 12:26 pm

ಚಿಕ್ಕನಾಯಕನಹಳ್ಳಿ: ಕುಡಿಯುವ ನೀರು, ಬೀದಿದೀಪ, ರಸ್ತೆ,ಚರಂಡಿಯಂತಹ ಮೂಲ ಸೌಲಭ್ಯಗಳನ್ನು ಒದಗಿಸಲು ಯೋಗ್ಯತೆಯಿಲ್ಲದ ಪುರಸಭೆ ನಮ್ಮನ್ನು ಪಟ್ಟಣ ವ್ಯಾಪ್ಯಿಯಿಂದ ಬಿಡುಗಡೆಗೊಳಿಸಬೇಕೆಂದು ಲಿಂಗಯ್ಯನ ಪಾಳ್ಯದ ಜನ ಒತ್ತಾಯಿಸಿದರು.
ಆ.1ರಂದು ಪಟ್ಟಣದ ಪುರಸಭೆ ಮುಂದೆ 6ನೇ ವಾರ್ಡಿನ ಕಲ್ಲೇನಹಳ್ಳಿ ಮಜುರೆ ಲಿಂಗಯ್ಯನಪಾಳ್ಯದ ಜನರಿಗ 3 ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ಈ ಬಗ್ಗೆ ಪುರಸಭೆ ಸಮಸ್ಯೆ ಪರಿಹರಿಸಿಲ್ಲ. ಜನಸಂಖ್ಯೆಯಾಧಾರದ ಮೇಲೆ ಪಪಂ ಆಗಿ ಹಿಂಬಡ್ತಿಯಾಗುವುದರಿಂದ ಪಾರಾಗಲು ನಮ್ಮ ಗ್ರಾಮಗಳನ್ನು ಪಟ್ಟಣ ವ್ಯಾಪ್ತಿಗೆ ಸೇರಿಸಿ ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು.
ಪುರಸಭೆ ವ್ಯಾಪ್ತಿಗೆ ಸೇರಿ 20 ವರ್ಷಗಳಾದರು ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಕಂದಾಯ ಕಟ್ಟಿಸಿಕೊಳ್ಳುವ ಪುರಸಭೆ, ನೀರು ಒದಗಿಸಲೂ ವಿಫಲವಾಗಿದೆ ಎಂದರು.
ಈ ಹಿಂದೆ ಪ್ರತಿಭಟನೆ ಮಾಡಿದಾಗ ಪ್ರತಿದಿನ ಟ್ಯಾಂಕರ್ನಲ್ಲಿ ನೀರು ಕಳುಹಿಸುವುದಾಗಿ ಭರವಸೆ ನೀಡಿದ್ದ ಮುಖ್ಯಧಿಕಾರಿಗಳು ಅತ್ತ ಕಡೆ ತಿರುಗಿಯು ನೋಡಿಲ್ಲ. ಈಗ ಪ್ರತಿಭಟಿಸಲು ಬಂದಾಗ ನಮಗೆ ಸಮರ್ಪಕ ಉತ್ತರ ನೀಡದೆ ಪಲಾಯನ ಮಾಡಿದ್ದಾರೆ. ಸಮಸ್ಯೆ ಪರಿಹಾರವಾಗುವವರೆಗು ಇಲ್ಲಿಂದ ಕದಲುವುದಿಲ್ಲ ಎಂದು ಮಹಿಳೆಯರು ಸೇರಿದಂತೆ ಪುರಸಭೆಗೆ ಬೀಗ ಹಾಕಿ ಧರಣಿ ಕೂತರು. ನಂತರ ಬಂದ ಮುಖ್ಯಾಧಿಕಾರಿಯನ್ನು ಪ್ರತಿಭಟನಾಕಾರರು ಖಾರವಾಗಿ ಪ್ರಶ್ನಿಸಿದಾಗ ಸಹನೆ ಕಳೆದುಕೊಂಡ ಅವರು ಮೊದಲು ಕಂದಾಯ ಕಟ್ಟಿ, ನಂತರ ಸವಲತ್ತು ಕೇಳಿ ಎಂದು ಒರಟಾಗಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಪುರಸಭಾ ಸದಸ್ಯ ಸಿ.ಪಿ. ಮಹೇಶ್, ನೀವು ಸವಲತ್ತು ನೀಡಿ ಕಂದಾಯ ಕೇಳಿ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಸಮಾಧಾನವಾಗಿ ಉತ್ತರಿಸಿದ ಮುಖ್ಯಾಧಿಕಾರಿ ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಅಲ್ಲಿಯವರಗೆ ಪ್ರತಿನಿತ್ಯ ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಲಲಿತಮ್ಮ, ಸರೋಜಮ್ಮ, ಪುಟ್ಟಮ್ಮ, ನಾಗಮಣಿ, ನೇತ್ರಾವತಿ, ಸುಶೀಲಮ್ಮ, ಶಿವಮ್ಮ, ಶಿವಣ್ಣ, ಲಕ್ಕಣ್ಣ, ರೇವಣ್ಣ, ಬಸವರಾಜು, ದಿನೇಶ್, ರವೀಸ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement