ಬೆಸ್ಕಾಂ ನೌಕರರ ಹಿತ ಕಾಯಲಾಗುವುದು
ತುಮಕೂರು: ಮುಂದಿನ ದಿನಗಳಲ್ಲಿ ಬೆಸ್ಕಾಂನ ಎಲ್ಲ ವರ್ಗದ ನೌಕರರ ಹಿತಕ್ಕಾಗಿ ಕಾಯ-ವಾಚ-ಮನಸ ಶ್ರಮಿಸುವುದಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಎಸ್. ಉಮೇಶಪ್ಪ ಭರವಸೆ ನೀಡಿದರು.
ನಗರದ ಕೋತಿತೋಪು ಮುಖ್ಯರಸ್ತೆಯ ಬೆಸ್ಕಾಂ ವಲಯ ಕಚೇರಿ ಆವರಣದಲ್ಲಿರುವ ಸಂಘದ ಕಚೇರಿ ಸಮೀಪ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಬೆಸ್ಕಾಂ ನೌಕರರ ಅಭಿವೃದ್ಧಿಗೆ ಹೋರಾಟ ನಡೆಸುತ್ತ ಬಂದಿದ್ದ ತಮಗೆ ಈ ಬಾರಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕೇಂದ್ರ ಸಮಿತಿಯ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಎನ್. ಗೋಪಾಲನ್ ಮಾತನಾಡಿ, ಜುಲೈ 21, 22 ರಂದು ನಡೆದ ಸಂಘದ 19ನೇ ತ್ರೈಮಾಸಿಕ ಮಹಾಸಭೆಯಲ್ಲಿ ಹಾಲಿ ಅಧ್ಯಕ್ಷ ಎಂ. ನಾಗರಾಜು ಮತ್ತು ಅವರ ತಂಡ ರಾಜ್ಯವ್ಯಾಪಿ ಅಪೂರ್ವ ವಿಜಯ ಸಾಧಿಸಿ ಆ.1 ರಂದು ನಡೆದ ರಾಜ್ಯಮಟ್ಟದ ಕೇಂದ್ರ ಸಮಿತಿ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೆ.ಎಸ್. ಉಮೇಶಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಎನ್. ಶ್ರೀನಿವಾಸ್ಗೌಡ ಹಾಗೂ ಕೇಂದ್ರ ಸಮಿತಿಯ ಸದಸ್ಯರಾಗಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಘದ ವತಿಯಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ. ಎಸ್. ಉಮೇಶಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಎಚ್.ಎನ್. ಶ್ರೀನಿವಾಸ್ಗೌಡ ಹಾಗೂ ಕೇಂದ್ರ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡ ಎನ್. ಗೋಪಾಲನ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಬೆಸ್ಕಾಂನ ನಾನಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗ ಈ ಮೂವರನ್ನು ಹಾರ ಹಾಕಿ ಅಭಿನಂದಿಸಿತು.