ಮಲ್ಲಾಘಟ್ಟ ಕೆರೆಗೆ ಹೇಮೆ ನೀರು ಹರಿಸಲು ಒತ್ತಾಯ
ತುರುವೇಕೆರೆ: ತಾಲೂಕಿನ ಎಲ್ಲ ಕೆರೆಕಟ್ಟೆಗಳಿಗೆ ಸಕಾಲದಲ್ಲಿ ಹೇಮಾವತಿ ನೀರು ಹರಿಸಬೇಕೆಂದು ಮಲ್ಲಾಘಟ್ಟ ಹಾಗೂ ತುರುವೇಕೆರೆ ಕೆರೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಅರಳೀಕೆರೆ ಶಿವಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ಪ್ರಮುಖ ಕೆರೆಯಾಗಿರುವ ಮಲ್ಲಾಘಟ್ಟ ಕೆರೆಗೆ ನೀರು ಹಾಯಿಸಿದರೆ ತಾಲೂಕಿನ ಬಹುತೇಕ ದೊಡ್ಡ ಕೆರೆಗಳನ್ನು ತುಂಬಿಸಬಹುದು. ಮಲ್ಲಾಘಟ್ಟ ಕೆರೆಯ ಸಾಂದ್ರತೆ ಸುಮಾರು 567 ಎಂಸಿಎಫ್ಟಿ ಇದ್ದು ಮುವತ್ತಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಗೆ ಕಾರಣವಾಗಲಿದೆ. ಮಲ್ಲಾಘಟ್ಟ ಕೆರೆಯಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹಾಯಿಸಿದರೂ ಸಾಕಷ್ಟು ನೀರು ಉಳಿಯಲಿದೆ. ಆದ್ದರಿಂದ ಪಟ್ಟಣ ಪ್ರದೇಶದ ಜನರಿಗೂ ಕುಡಿಯುವ ನೀರಿಗೆ ತೊಂದರೆಯಾಗದು ಹಾಗೂ ತಾಲೂಕಿನಲ್ಲಿನ ಕೆರೆ ಕಟ್ಟೆಗಳು ತುಂಬುವ ಮೂಲಕ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲೆಗೆ ಹೇಮಾವತಿ ನೀರು ಬಿಡುಗಡೆ ಮಾಡುವ ಸಂಧರ್ಭದಲ್ಲೇ ಕಾಲುವೆಗಳು ದುರಸ್ತಿಗೆ ಬರುವುದು ಅನುಮಾನಕ್ಕೆ ಈಡು ಮಾಡಿದೆ. ಯಾರೋ ದುರುದ್ದೇಶ ಪೂರ್ವಕವಾಗಿ ಇಂತಹ ಕೃತ್ಯವನ್ನು ಎಸಗುತ್ತಿರಬಹುದು ಎಂಬ ಅನುಮಾನ ಮೂಡುತ್ತದೆ ಎಂದರು. ಕಾಲುವೆ ಹಾಳಾಗಲು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ. ಕೂಡಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ತಾಲೂಕಿನ ಎಲ್ಲ ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರಯ್ಯ, ಅಣ್ಣಾಚಾರ್, ಮಹಲಿಂಗಯ್ಯ, ವಕೀಲ ಉಮೇಶ್ ಮತ್ತಿತರರಿದ್ದರು.