ಅಡುಗೆ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ
ತಿಪಟೂರು: ನಗರಸಭೆಯಿಂದ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅಡುಗೆ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಮಹಿಳೆಯರಿಂದ ಅರ್ಜಿ ಕರೆಯಲಾಗಿದೆ. ಅರ್ಜಿಯನ್ನು 15ದಿನದೊಳಗಾಗಿ ನಗರಸಭಾ ಕಚೇರಿಗೆ ಸಲ್ಲಿಸಬಹುದಾಗಿದ್ದು, ಮಾಹಿತಿಗಾಗಿ ನಗರಸಭಾ ಕಚೇರಿ ಸಂಪರ್ಕಿಸಬಹುದು.
ಬಾಲಕಿ ಅಪಹರಣ: ಯುವಕ ವಶಕ್ಕೆ
ಕುಣಿಗಲ್: ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ, ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯ ಎಸ್.ಜಿ. ಪಾಳ್ಯದ ಶಶಿಕಲಾ ಎಂಬುವರ ಮಗಳಾದ 16ವರ್ಷದ ಬಾಲಕಿಯನ್ನು (ಪೂಜಾ) ಕಾಲೇಜುರಜೆ ನಿಮಿತ್ತ ಆಕೆಯ ಅಜ್ಜಿ ಊರಾದ ಬಿ.ಜಿ. ಕೊಪ್ಪಲಿಗೆ ಕಳಿಸಿದ್ದು, ಕಳೆದ ಶುಕ್ರವಾರ ಬೆಂಗಳೂರಿನ ದೀಪಕ್ ಎಂಬಾತ ತನ್ನ ಸ್ನೇಹಿತರ ನೆರವಿನಿಂದ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದರು. ಹುಲಿಯೂರುದುರ್ಗ ಪೊಲೀಸರು, ದೀಪಕ್ ಮತ್ತು ಬಾಲಕಿಯನ್ನು ಬೆಂಗಳೂರಿನ ಸುಂಕದಕಟ್ಟೆ ಸಮೀಪದ ಮನೆಯೊಂದರಿಂದ ವಶಕ್ಕೆ ಪಡೆದರು.