ಶಿರಾ: ಅನಿಯಮಿತ ಲೋಡ್ ಶೆಡ್ಡಿಂಗ್ ಮತ್ತು ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ, ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ವಿದ್ಯುತ್ ಕಚೇರಿ ಮುತ್ತಿಗೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.
ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಬಿ. ಕೆ.ಮಂಜುನಾಥ್ ನೇತೃತ್ವದಲ್ಲಿ ನಗರದಲ್ಲಿನ ಪಕ್ಷದ ಕಚೇರಿ ಆವರಣದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಬಿ.ಕೆ. ಮಂಜುನಾಥ್ ಸತತ ಬರಗಾಲದ ಜೊತೆಗೆ ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ರೈತರು ಕಂಗಾಲಾಗಿದ್ದಾರೆ.
ದಿನವೊಂದಕ್ಕೆ ಕನಿಷ್ಠ 8 ಗಂಟೆಯಾದರೂ ರೈತರಿಗೆ ಮೂರು ಫೇಸ್ ವಿದ್ಯುತ್ ಪೂರೈಸಬೇಕು. ಸುಟ್ಟುಹೋಗಿರುವ ಟ್ರಾನ್ಸ್ಫಾರ್ಮರ್ಗಳನ್ನು ತಕ್ಷಣ ಬದಲಿಯಿಸಬೇಕು. ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಬೇಕು ಮತ್ತು ರೈತರ ಪಂಪ್ಸೆಟ್ಣಗಳಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬೆಸ್ಕಾಂ ಅಧಿಕಾರಿಗಳಿಗೆ ನೀಡಲಾಯಿತು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಲತಾಕೃಷ್ಣ, ತಾಲೂಕು ಅಧ್ಯಕ್ಷ ಬಸವರಾಜು, ನಗರಾಧ್ಯಕ್ಷ ನಟರಾಜಾಚಾರ್, ಎಸ್ಸಿ ಘಟಕದ ಅಧ್ಯಕ್ಷ ಎನ್.ದಾಸಪ್ಪ, ಮುಖಂಡರಾದ ಚಾಮರಾಜಗೌಡ, ಮಾಲಿಮರಿಯಪ್ಪ, ಎಸ್.ಪಿ. ಕೃಷ್ಣಮೂರ್ತಿ, ಆನಂದ್, ಪಡಿ ರಮೇಶ್, ಪುಟ್ಟರಾಮು, ಸಂತೋಶ್, ನರಸಿಂಹರಾಜು, ಅಜ್ಜಣ್ಣ, ಮಂಜುನಾಥ್ ಇದ್ದರು.