ತಿಪಟೂರು: ಅಸಮರ್ಪಕ ವಿದ್ಯುತ್ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸಿ. ನಾಗೇಶ್, ಹದಿನೈದು ದಿನಗಳಲ್ಲಿ ಗ್ರಾಮೀಣ ರೈತರಿಗೆ ದಿನಕ್ಕೆ ಕನಿಷ್ಠ 6 ಗಂಟೆ ವಿದ್ಯುತ್ ಪೂರೈಕೆ ಮಾಡದಿದ್ದರೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಒಡೆದಿರುವ ಹೇಮಾವತಿ ನಾಲೆ ಸರಿಪಡಿಸಲು ಸಮರೋಪಾದಿಯಲ್ಲಿ ನಡೆಯಬೇಕಾಗಿದ್ದ ಕೆಲಸ ಆಮೆಗತಿಯಲ್ಲಿ ಸಾಗಿದೆ. ಆಗಸ್ಟ್ ತಿಂಗಳು ಬಂದರೂ ತಾಲೂಕಿನ ಯಾವುದೇ ಕೆರೆ ತುಂಬಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನೀರಿಲ್ಲದೆ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾನೆ ಎಂದರು.
ಇದಕ್ಕೂ ಮುಂಚೆ ಪಟ್ಟಣದ ಕೆರೆಗೋಡಿ ವೃತ್ತದಿಂದ ಐಬಿ ವೃತ್ತದವರಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿ, ಐಬಿ ವೃತ್ತದಲ್ಲಿ ಕೆಲ ನಿಮಿಷ ರಸ್ತೆ ತಡೆ ನಡೆಸಿದರು. ನಂತರ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಎಪಿಎಂಸಿ ಅಧ್ಯಕ್ಷ ಮಾದಿಹಳ್ಳಿ ಪ್ರಕಾಶ್, ಗಂಗರಾಜು, ದಿವಾಕರ್, ಶಿವಸ್ವಾಮಿ ಮಾತನಾಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಹರಿಸಮುದ್ರ ಗಂಗಾಧರ್, ಭಾನುಪ್ರಕಾಶ್, ಬಿಸಲೇಹಳ್ಳಿ ಜಗದೀಶ್ ಮತ್ತಿತರರು ಇದ್ದರು.