ಕುಣಿಗಲ್: ಪುರಸಭೆ12ನೇ ವಾರ್ಡ್ ಪ್ರದೇಶದ ವಾನಂಬಾಡಿ ಕಾಲೊನಿಯ ಖಾತೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು, ಪುರಸಭೆ ಮುಖ್ಯಾಧಿಕಾರಿಗಳ ನಡುವೆ ವಾಗ್ವಾದ ನಡೆದು, ಪುರಸಭೆ ಆವರಣ ಗೊಂದಲದ ಗೂಡಾದ ಘಟನೆ ಬುಧವಾರ ನಡೆಯಿತು.
ವಾನಂಬಾಡಿ ಕಾಲೊನಿಯ ಕಣ್ಣಪ್ಪ ಎಂಬಾತನ ಆಸ್ತಿಖಾತೆಯನ್ನು ಬೇರೊಬ್ಬ ವ್ಯಕ್ತಿಗೆ ಮಾಡಿದ್ದಾರೆಂದು ಆರೋಪಿಸಿ, ಕಣ್ಣಪ್ಪ ದಂಪತಿ ಮಂಗಳವಾರ ಮೌನಪ್ರತಿಭಟನೆ ನಡೆಸಿ ತೆರಳಿದ್ದರು. ಬುಧವಾರ ಬೆಳಗ್ಗೆ ದಂಪತಿಯನ್ನು ಬೆಂಬಲಿಸಿ, ವಾರ್ಡ್ನ ಇತರೆ ನಾಗರಿಕರು ಪುರಸಭೆಕಚೇರಿ ಮುಂಭಾಗದಲ್ಲಿ ತಮಟೆ ಸಮೇತ ಪ್ರತಿಭಟನೆ ಪ್ರಾರಂಭಿಸಿದರು. ಕಚೇರಿಗೆ ಆಗಮಿಸಿದ ಮುಖ್ಯಾಧಿಕಾರಿ ಅನ್ನದಾನಿ ಅವರೊಂದಿಗೆ ಖಾತೆ ಮಾಡಿರುವ ಬಗ್ಗೆ ಪ್ರತಿಭಟನಾಕಾರರು ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಂಡಾಗ, ಪ್ರತಿಭಟನಾಕಾರರು ಮತ್ತು ಮುಖ್ಯಾಧಿಕಾರಿಯೊಂದಿಗೆ ವಾಗ್ವಾದ ನಡೆದು, ಮುಖ್ಯಾಧಿಕಾರಿ ಪೊಲೀಸರನ್ನು ಕರೆಸುವ ಎಚ್ಚರಿಕೆ ನೀಡಿದ್ದರಿಂದ ಪ್ರತಿಭಟನೆ ತೀವೃಗೊಂಡಿತು. ಸದಸ್ಯರಾದ ರಂಗಸ್ವಾಮಿ, ಅರುಣಕುಮಾರ್, ಚಂದ್ರಶೇಖರ್ ಪ್ರತಿಭಟನೆ ಬೆಂಬಲಿಸಿದರು. ಬುಧವಾರ,ಪುರಸಭೆಯಲ್ಲಿ ಬಜೆಟ್ ಮಂಡನೆ ಸಭೆ ಏರ್ಪಾಟಾಗಿದ್ದು, ಅಧ್ಯಕ್ಷ ಹರೀಶ್, ಪ್ರತಿಭಟನೆ ಕೈಬಿಟ್ಟು ಸಭೆಗೆ ಬರುವಂತೆ ಮನವಿ ಮಾಡಿದರು. ಆದರೆ ಸಮಸ್ಯೆ ಬಗೆ ಹರಿಸುವವರೆಗೂ ಸಭೆಗೆ ಬರುವುದಿಲ್ಲವೆಂದು ಕೆಲ ಸದಸ್ಯರು ಪಟ್ಟುಹಿಡಿದರು. ಅಧ್ಯಕ್ಷರು, ಖಾತೆ ಈ ಹಿಂದಿನಂತೆ ಯಥಾಸ್ಚಿತಿಗೆ ಕಾಯ್ದುಕೊಂಡು, ನ್ಯಾಯಾಲಯದಲ್ಲಿ ಬಗೆಹರಿದ ನಂತರ ಪುರಸಭೆಯಲ್ಲಿ ಮುಂದಿನ ಕ್ರಮಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಮುಖ್ಯಾಧಿಕಾರಿ, ಅಧ್ಯಕ್ಷರ ಸೂಚನೆಗೆ ಸಹಮತ ವ್ಯಕ್ತಪಡಿಸದ ಕಾರಣ, ಪ್ರತಿಭಟನಾಕಾರರು ಏಕಾಏಕಿ ಮುಖ್ಯಾಧಿಕಾರಿ ಕೊಠಡಿಗೆ ನುಗ್ಗಿ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಸಿ, ಅವರತ್ತ ಮುನ್ನುಗ್ಗಲು ಯತ್ನಿಸಿದಾಗ ಪುರಸಭೆ ಕಚೇರಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ, ಪೊಲೀಸರು ಮಧ್ಯಪ್ರವೇಶಿಸಿ, ಎಲ್ಲರನ್ನು ಹೊರಹಾಕಿದರು.
ವಿಷಯ ತಿಳಿದ ತಹಸೀಲ್ದಾರ್ ಶಂಭುಲಿಂಗಯ್ಯ, ಸ್ಥಳಕ್ಕಾಗಮಿಸಿ ಪುರಸಭಾದ್ಯಕ್ಷ, ಸದಸ್ಯರೊಂದಿಗೆ ಚರ್ಚಿಸಿ,ಪುರಸಭೆಯಲ್ಲಿ ನಿಯಮಬಾಹಿರವಾಗಿ ಮಾಡಲಾಗಿರುವ ಖಾತೆಯ ಬಗ್ಗೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಸಮಸ್ಯೆ ಬಗೆಹರಿದ ನಂತರವಷ್ಟೇ ಪ್ರತಿಭಟನೆ ಕೈಬಿಡುವುದಾಗಿ ಪ್ರತಿಭಟನಾಕಾರರು ಧರಣಿ ಮುಂದುವರಿಸಿದ್ದಾರೆ, ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.