ತುಮಕೂರು: ಜಗತ್ತಿನ ಜನರು ಅಹಿಂಸೆ ಮತ್ತು ಸಂಕಷ್ಟಗಳಿಂದ ತುಂಬಿರುವ ಬದುಕು ಬಯಸದೆ ಶಾಂತಿ ಮತ್ತು ಸೌಹಾರ್ದಬದುಕನ್ನು ಬಯಸುತ್ತಾರೆ. ಆದರೆ, ಕೆಲವು ಸ್ಥಾಪಿತ ಹಿತಾಸಕ್ತಿ ತಮ್ಮ ಸ್ವಾರ್ಥಸಾಧನೆಗೆ ಯುದ್ಧಗಳನ್ನು ನಡೆಸುವ ಮೂಲಕ ಜಗತ್ತಿನ ಶಾಂತಿ ಹಾಳು ಮಾಡಲಾಗುತ್ತಿದೆ ಎಂದು ಹಿರಿಯ ಇತಿಹಾಸ ತಜ್ಞ ಪ್ರೊ. ಜಿ.ಎಂ. ಶ್ರೀನಿವಾಸಯ್ಯ ಅಭಿಪ್ರಾಯಪಟ್ಟರು
ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ, ಶಾಂತಿಗಾಗಿ ನಾವೂ ನೀವೂ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿ-ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ತಾಲೂಕು ಸಮಿತಿ ವತಿಯಿಂದ ನಗರದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಿರೋಶಿಮಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎರಡನೇ ಮಹಾಯುದ್ಧದಲ್ಲಿ ವಿಶ್ವದ 32 ರಾಷ್ಟ್ರಗಳು ತಮಗೆ ಇಷ್ಟ ಇಲ್ಲದೆ ಇದ್ದರೂ ಯುದ್ಧದಲ್ಲಿ ಭಾಗವಹಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿತು ಎಂದ ಅವರು ಹಾಲಿ ಭೂ ಗ್ರಹವನ್ನು ಒಂದು ಸಾವಿರ ಬಾರಿ ಸುಟ್ಟು ಭಸ್ಮ ಮಾಡಬಹುದಾದ ಅಣ್ವಸ್ತ್ರಗಳಿದ್ದು ಇದು ಜಾಗತೀಕ ಶಾಂತಿ ಚಳವಳಿಯ ಒತ್ತಾಯದಂತೆ ಇದನ್ನು ನಾಶ ಪಡಿಸಬೇಕೆಂದು ಒತ್ತಾಯಿಸಿದರು.
ವಿಶ್ವಶಾಂತಿ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ತೆರಳಿದ್ದ ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಮಾತನಾಡಿ ಇಂದು ವೈಜ್ಞಾನಿಕ ಅವಿಷ್ಕಾರ ಒಂದರ ದುರ್ಬಳಕೆಯಿಂದಾಗಿ ವಿಜ್ಞಾನವನ್ನು ದೂಷಿಸುವದು ಸರಿಯಲ್ಲ, ವೈಜ್ಞಾನಿಕ ಆವಿಷ್ಕಾರಗಳು ಮಾನವ ಸಮಾಜದ ಕಲ್ಯಾಣಾಭಿವೃದ್ಧಿಗೆ ವಿನಿಯೋಗವಾಗಬೇಕು. ಸಂಪನ್ಮೂಲಗಳು ಜನರ ಸಂಕಷ್ಟಗಳಾದ ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ, ಆರೋಗ್ಯ, ವಸತಿ ಪ್ರಶ್ನೆಗಳಿಗೆ ವಿನಿಯೋಗಿಸಬೇಕು ಎಂದು ಪ್ರತಿಪಾದಿಸಿದರು. ಉಪಪ್ರಾಂಶುಪಾಲ ಪ್ರೊ. ಡ್ಯಾನಿಯಲ್ ಮನೋರಾಜ್, ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್, ಮಹದೇವ್, ಸದಾಶಿವು ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಇ. ಶಿವಣ್ಣ ಡಿವೈಎಫ್ಐನ ಜಿಲ್ಲಾಧ್ಯಕ್ಷ ಎಸ್. ರಾಘವೇಂದ್ರ, ನಾರಾಯಣಸ್ವಾಮಿ ಎಸ್ಎಫ್ಐನ ಜ್ಯೊತಿ, ದಿವ್ಯ ಉಪಸ್ಥಿತರಿದ್ದರು.