ಉಗಮ ಶ್ರೀನಿವಾಸ್
ಕ. ಪ್ರ. ವಾರ್ತೆ, ತುಮಕೂರು, ಆ.6
ಖಾಸಗಿ ಲೇಔಟ್ಗೆ ಅನುಮತಿ ಕೊಡುವುದರಲ್ಲೇ ಮಗ್ನವಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರ ಅಪರೂಪಕ್ಕೆ ಬೃಹತ್ ಲೇಔಟ್ ನಿರ್ಮಾಣಕ್ಕೆ ಕೈ ಹಾಕಿದೆ.
ತುಮಕೂರು ಕ್ಯಾತ್ಸಂದ್ರ ದಾಟಿದ ಬಳಿಕ ಇರುವ ಮುತ್ಸಂದ್ರದಲ್ಲಿ ಭರ್ತಿ 200 ಎಕರೆ ಬೃಹತ್ ವಿಸ್ತ್ರೀರ್ಣದಲ್ಲಿ ಲೇಔಟ್ ನಿರ್ಮಿಸಲು ತೀರ್ಮಾನಿಸಿದೆ.
200 ಎಕರೆಯಿಂದ 4 ಸಾವಿರ ನಿವೇಶನ ಅಭಿವೃದ್ಧಿಪಡಿಸಿ ಅದರಲ್ಲಿ 2 ಸಾವಿರ ನಿವೇಶನಗಳನ್ನು ರೈತರಿಗೆ, ಉಳಿದ 2 ಸಾವಿರ ಸೈಟುಗಳನ್ನು ಸಾರ್ವಜನಿಕರಿಗೆ ಮೀಸಲಿರಿಸುವ ಗುರಿ ಹೊಂದಲಾಗಿದೆ.
ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಗ್ರಾಮಾಂತರ ಶಾಸಕ ಸುರೇಶ್ಗೌಡ, ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ನೇತೃತ್ವದಲ್ಲಿ ನಡೆದ ಟೂಡಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು 10 ದಿನದೊಳಗೆ ಭೂಸ್ವಾಧೀನ ಪ್ರಕ್ರಿಯೆಗೆ ಮಾತುಕತೆ ನಡೆಸಲಾಗುವುದು. ಅತಿ ಶೀಘ್ರದಲ್ಲೇ ಲೇಔಟ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಯುಜಿಡಿ, ಓವರ್ಹೆಡ್ ಟ್ಯಾಂಕ್ ಸೇರಿದಂತೆ ಸಕಲ ಸೌಕರ್ಯಗಳನ್ನು ಒಳಗೊಂಡ ಈ ಲೇಔಟ್ ನಿರ್ಮಾಣಕ್ಕೆ ಹುಡ್ಕೋದಿಂದ ಆರಂಭಿಕವಾಗಿ ರು. 50 ಕೋಟಿ ಸಾಲ ಪಡೆಯಲು ನಿರ್ಧರಿಸಲಾಗಿದೆ. ಅತಿ ಶೀಘ್ರದಲ್ಲೇ ಲೇಔಟ್ ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲೂ ಟೂಡ ನಿವೇಶನ ಹಂಚಲು ತೀರ್ಮಾನ ಕೈಗೊಂಡಿದೆ.
ಲೇಔಟ್ ನಿರ್ಮಾಣ ಸಂಬಂಧ ಮುತ್ಸಂದ್ರ ಭಾಗದ ರೈತರೊಂದಿಗೆ ಸಭೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದು ಭೂ ಸ್ವಾಧೀನಪಡಿಸಿಕೊಂಡು ಅತ್ಯಾಧುನಿಕ ಲೇಔಟ್ ನಿರ್ಮಿಸುವ ಇರಾದೆ ನಗರಾಡಳಿತ ಹೊಂದಿದೆ.
389 ನಿವೇಶನ ಶೀಘ್ರ ವಿಲೇವಾರಿ: ಶೆಟ್ಟಿಹಳ್ಳಿ, ಮೆಳೆಕೋಟೆ, ಕ್ಯಾತ್ಸಂದ್ರದಲ್ಲಿ ಟೂಡಾದಿಂದ ನಿರ್ಮಾಣಗೊಂಡಿದ್ದ 389 ಸೈಟುಗಳನ್ನು ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಈ ನಿವೇಶನದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ಲೇಔಟ್ ಗಿದ್ದ ಎಲ್ಲ ಅಡೆತಡೆಗಳು ಬಗೆಹರಿದಿದ್ದು, ಅತಿ ಶೀಘ್ರದಲ್ಲಿ ಸಂಬಂಧಪಟ್ಟವರಿಗೆ ನೀಡಲು ನಿರ್ಧರಿಸಲಾಗಿದೆ.
ದಲಿತರು, ಹಿಂದುಳಿದವರಿಗೆ ಅಪಾರ್ಟ್ಮೆಂಟ್
ತುಮಕೂರು ಸಮೀಪದ ದಿಬ್ಬೂರಿನಲ್ಲಿ ನೆಲಮಳಿಗೆ ಹಾಗೂ ಎರಡು ಮಹಡಿಯ ಅಪಾರ್ಟ್ಮೆಂಟ್ ನಿರ್ಮಿಸಲಾಗುತ್ತಿದೆ. 10.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುವ ಈ ಅಪಾರ್ಟ್ಮೆಂಟ್ನಲ್ಲಿ ಒಟ್ಟು 1200 ಮನೆಗಳನ್ನು ನಿರ್ಮಿಸಲಾಗುವುದು. ಇದರಲ್ಲಿ 600 ಮನೆಗಳನ್ನು ದಲಿತರಿಗೆ, ಇನ್ನುಳಿದ 600 ಮನೆಗಳನ್ನು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ನೀಡಲಾಗುವುದು. ಮೂರವರೆ ಚೆದುರ ಅಡಿ ವಿಸ್ತೀರ್ಣದಲ್ಲಿ ಈ ಮನೆಗಳು ನಿರ್ಮಾಣವಾಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಬಸ್ ಸೌಕರ್ಯ ಸೇರಿದಂತೆ ಸಕಲ ಸೌಲಭ್ಯವೂ ಒಳಗೊಂಡಿರುತ್ತದೆ.
ಅತ್ಯಾಧುನಿಕ ಲೇಔಟ್
ತುಮಕೂರು ಸಮೀಪದ ಮುತ್ಸಂದ್ರದಲ್ಲಿ ಟೂಡಾ ದಿಂದ ಲೇಔಟ್ ನಿರ್ಮಿಸಲಾಗುವುದು. ಮಧ್ಯಮವರ್ಗದ ಜನರು ತುಮಕೂರು ನಗರದಲ್ಲಿ ನಿವೇಶನ ಹೊಂದಬೇಕು ಎಂಬ ದೃಷ್ಟಿಯಿಂದ ಈ ಲೇಔಟ್ಗೆ ಕೈ ಹಾಕಲಾಗಿದೆ.
ರಫೀಕ್ ಅಹಮದ್, ಶಾಸಕ