ಹುಳಿಯಾರು: ಜನರಿಗೆ ಉಪಟಳ ನೀಡುತ್ತಿದ್ದ ಕರಡಿಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಒಡ್ಡಿದ್ದ ಬೋನಿಗೆ ತಾಯಿ ಕರಡಿ ಬದಲು ಮರಿ ಕರಡಿ ಬಿದ್ದ ಘಟನೆ ಕೆಂಕೆರೆ ಸಮೀಪದ ಅಡಾಣಿಕಲ್ಲು ತೋಟದಲ್ಲಿ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.
ಕೆಂಕೆರೆ ಗ್ರಾಪಂ ವ್ಯಾಪ್ತಿಯ ಹೊನ್ನಯ್ಯನ ಪಾಳ್ಯ, ಬರದಲೇಪಾಳ್ಯ, ಅಡಾಣಿಕಲ್ಲು ಸುತ್ತಮುತ್ತ ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿ ರೈತರು ಹೊಲಗದ್ದೆಗಳಿಗೆ ಹೋಗಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವಾರ ವ್ಯಕ್ತಿಯೊಬ್ಬರನ್ನು ಪರಚಿ ಗಾಯಗೊಳಿಸಿದ ಕರಡಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಬುಕ್ಕಾಪಟ್ಟಣ ವಲಯದ ಅರಣ್ಯ ಸಿಬ್ಬಂದಿ ಕರಡಿ ಅಡ್ಡಾಡಿದ ಜಾಗದಲ್ಲಿ ಬೋನು ಇಟ್ಟಿದ್ದರು. ಬೋನಿನಲ್ಲಿಟ್ಟಿದ್ದ ಹಲಸಿನ ಹಣ್ಣು ತಿನ್ನುವ ಆಸೆಗೆ ಕರಡಿ ಬರುವ ನಿರೀಕ್ಷೆಯಲ್ಲಿದ್ದ ಸಿಬ್ಬಂದಿಗೆ ಮಂಗಳಾವಾರ ಮುಂಜಾನೆ ಮರಿಕರಡಿ ಬೋನಿಗೆ ಬಿದಿದ್ದು ಕಂಡುಬಂತು. ಬೋನಿಗೆ ಬಿದ್ದ ಮರಿಕರಡಿಯನ್ನು ಇಲಾಖೆ ಅಧಿಕಾರಿಗಳು ಗಾಣಧಾಳು ಪಶು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಸಮೀಪದ ರಾಮಪ್ಪನ ಕೆರೆ ಭಾಗದ ಅರಣ್ಯಕ್ಕೆ ಬಿಟ್ಟಿದ್ದು ತಾಯಿಕರಡಿ ಹಿಡಿಯಲು ಯೋಜನೆ ರೂಪಿಸಿದ್ದಾರೆ.
ತಾಲೂಕು ಮಟ್ಟಕ್ಕೆ ಆಯ್ಕೆ
ಹುಳಿಯಾರು: ಪಟ್ಟಣದ ಟಿಆರ್ಎಸ್ಆರ್ ಶಾಲೆವತಿಯಿಂದ ಆಯೋಜಿಸಿದ್ದ ಪ್ರೌಢಶಾಲಾ ವಿಭಾಗದ ಹೋಬಳಿ ಮಟ್ಟದ ಬಿ ವಿಭಾಗದ ಕ್ರೀಡಾಕೂಟದಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕರ ವಿಭಾಗದ ಗುಂಪು ಆಟಗಳಲ್ಲಿ ವಾಲಿಬಾಲ್, ಕಬಡ್ಡಿಯಲ್ಲಿ ಪ್ರಥಮ, ಖೋಖೋ, ಬ್ಯಾಡ್ಮಿಂಟನ್ನಲ್ಲಿ ದ್ವಿತೀಯ ಸ್ಥಾನ, ಬಾಲಕಿಯರು ಬ್ಯಾಡ್ಮಿಂಟನ್ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಥ್ಲೆಟಿಕ್ಸ್ನ 3000ಮೀ ಓಟದಲ್ಲಿ ಮಿಲನ್ ಪ್ರಥಮ, ಯೋಗೀಶ್ ದ್ವಿತೀಯ, ಚಕ್ರ ಎಸೆತ ಹಾಗೂ ಜಾವಲಿನ್ ಎಸೆತದಲ್ಲಿ ಸುರೇಂದ್ರ ಪ್ರಥಮ, 1500ಮೀ ಓಟದಲ್ಲಿ ಚಂದನ ತೃತೀಯ, ಉದ್ದಜಿಗಿತದಲ್ಲಿ ಸಾಗರ್ ತೃತೀಯ, ಶಾಟ್ಪುಟ್ ಎಸೆತದಲ್ಲಿ ಸುರೇಂದ್ರ ತೃತೀಯ, ಅಬ್ಬುತಾಯರ್ ಜಿಗಿತದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ, ಮೇಘನ ಜಾವಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಶಾಲೆಗೆ ಸಮಗ್ರಪ್ರಶಸ್ತಿ ತಂದುಕೊಟ್ಟಿದ್ದಾರೆ. ದೈಹಿಕ ಶಿಕ್ಷಕ ಮನ್ಸೂರ್ ಅಹಮದ್, ಉಪಪ್ರಾಂಶುಪಾಲೆ ಇಂದಿರಾ, ಎಸ್ಡಿಎಂಸಿ ಉಪಾಧ್ಯಕ್ಷ ಮಹೇಶ್ ಹಾಗೂ ಶಾಲಾ ಸಿಬ್ಬಂದಿ ವಿಜೇತ ಮಕ್ಕಳನ್ನು ಅಭಿನಂದಿಸಿಸಿದ್ದಾರೆ.