ತುಮಕೂರು: ಬಹಳ ದಿನಗಳಿಂದ ತಾಯಿಯ ಪ್ರೀತಿಯಿಂದ ವಂಚಿತಳಾಗಿದ್ದ 4 ವರ್ಷದ ಬಾಲಕಿಯನ್ನು ಆಕೆಯ ತಾಯಿಯ ಪ್ರೀತಿ ಹಾಗೂ ಆರೈಕೆಗೆ ಅನುವು ಮಾಡಿಕೊಟ್ಟ ಪ್ರಸಂಗ ನಗರದಲ್ಲಿ ಮಕ್ಕಳ ಕಲ್ಯಾಣ ಸಮಿತಿಯಿಂದ ನಡೆದಿದೆ.
ದೊಡ್ಡಸಾರಂಗಿ ಪಾಳ್ಯದ ಚೆಲುವರಾಜು ಎಂಬಾತ ಪತ್ನಿಗೆ ಕಿರುಕುಳ ನೀಡುತ್ತ, ದೌರ್ಜನ್ಯ ಎಸಗುತ್ತಿದ್ದ ಹಿನ್ನೆಲೆಯಲ್ಲಿ ಆತನ ಪತ್ನಿ ಸಂರಕ್ಷಣೆಗಾಗಿ ಇಲ್ಲಿನ ಸಾಂತ್ವನ ಸಹಾಯ ಕೇಂದ್ರದ ಮೊರೆ ಹೋಗಿದ್ದರು. ಆಕೆಯನ್ನು ಸ್ವಾಧಾರ್ ಕೇಂದ್ರದಲ್ಲಿ ಸಂರಕ್ಷಿಸಲಾಗಿತ್ತು. ಆನಂತರ ನಡೆದ ವಿಚಾರಣೆ ಸಂದರ್ಭದಲ್ಲಿ ಪತಿ ಚೆಲುವರಾಜು, ನಾಜೂಕಾಗಿ ಪತ್ನಿಯೊಂದಿಗೆ ಸಂಸಾರ ಮಾಡುವುದಾಗಿ ತಿಳಿಸಿ ಆನಂತರ ಮಗುವನ್ನು ನೋಡಲು ಆಕೆಗೆ ಬಿಡದೆ ಸತಾಯಿಸುತ್ತಿದ್ದನು. ಇಲ್ಲಿನ ಸದಾಶಿವನಗರದ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ 4 ವರ್ಷದ ಬಾಲಕಿ ತಾಯಿಯ ಪ್ರೀತಿಯಿಂದ ವಂಚಿತವಾಗಿ ದಿನೇ ದಿನೆ ಕೃಷವಾಗುತ್ತ ಬಂದಿತ್ತು. ಮಗುವು ತಾಯಿಯ ಹಂಬಲಿಕೆಯಲ್ಲಿ ಇದ್ದುದನ್ನು ಗಮನಿಸಿ ಸಾಂತ್ವನ ಕೇಂದ್ರವು ಈ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತಂದಿತು. ಸ್ಥಳೀಯ ಪೊಲೀಸರಿಂದ ಈ ವಿಷಯದಲ್ಲಿ ತ್ವರಿತ ಕ್ರಿಯೆ ಕೈಗೂಡದ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತುರ್ತು ಕ್ರಮಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆಗೆ ಸದರಿ ಚೆಲುವರಾಜು ಅವರನ್ನು ಹಾಜರಾಗುವಂತೆ ಸೂಚಿಸಲಾಗಿತ್ತು.
ಮಗುವಿನ ಹೇಳಿಕೆ ಹಾಗೂ ಮಗುವಿನ ಹಿತಾಸಕ್ತಿ, ಹಾರೈಕೆ, ವಾತ್ಸಲ್ಯ ಇವುಗಳನ್ನು ಪರಿಗಣಿಸಿದ ಸಮಿತಿಯು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮಗುವನ್ನು ತಾಯಿಯ ಆಸರೆಗೆ ಒಪ್ಪಿಸಿದೆ. ಸದರಿ ಮಗು ಸಂಭ್ರಮದಿಂದ ತಾಯಿಯ ಮಡಿಲು ಸೇರಿಕೊಂಡಿದೆ.