ಪಾವಗಡ : ಜಿಲ್ಲಾಡಳಿತ ಕ್ರಮ ಕೈಗೊಂಡು ಆದೇಶ ಜಾರಿ ಮಾಡಿದ್ದರೂ ತೆರದ ಕೊಳವೆ ಬಾವಿಗಳನ್ನು ಮುಚ್ಚಿಸುವಲ್ಲಿ ಇಲ್ಲಿನ ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಜಿಪಂ ವತಿಯಿಂದ 2ವರ್ಷದ ಹಿಂದೆ ತಾಲೂಕಿನ ಗುಜ್ಜನಡು ಗ್ರಾಮದ ಹೊರವಲಯದ ಕೊಲ್ಲಾಪುರಮ್ಮ ದೇವಸ್ಥಾನದ ಬಳಿ ಪಂಪ್ಹೌಸ್ ಇದ್ದು ಇಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಕೊರೆಸಲಾಗಿದೆ. ನೀರು ಬಾರದೇ ಕೊಳವೆ ಬಾವಿ ವಿಫಲವಾಗಿದೆ.
ಈ ಕೊಳವೆ ಬಾವಿ ಕೊರೆಸಿ 2ವರ್ಷ ಕಳೆದರೂ ತೆರದ ಕೊಳವೆಯನ್ನು ಮುಚ್ಚಿಸುವಲ್ಲಿ ಜಿಪಂ ಎಂಜಿನಿಯರ್ಗಳು ಮತ್ತು ಗ್ರಾಪಂನ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೊಳವೆಬಾವಿ ಮುಚ್ಚಿಸಲು ಗ್ರಾಪಂ ಕಾರ್ಯದರ್ಶಿಗೆ ಗ್ರಾಮಸ್ಥರು ಆನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಆನಾಹುತಕ್ಕೆ ಜಿಲ್ಲಾಡಳಿತ ನೇರ ಹೊಣೆ ಹೊರಬೇಕಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟ್ಟಣದ 22ನೇ ವಾರ್ಡ್ ಜನನಿಬಿಡ ಪ್ರದೇಶವಾಗಿದ್ದು ಪುರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಮ್ಮ ಅವರ ಮನೆಯ ಸಮೀಪ ಕೊಳವೆ ಬಾವಿಯೊಂದು ಬಾಯಿ ತೆರೆದುಕೊಂಡು ಬಲಿಗಾಗಿ ಕಾಯುತ್ತಿದ್ದು ಇದನ್ನು ಮುಚ್ಚಲು ಪುರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪುರಸಭೆ ವತಿಯಿಂದ ಕೊಳವೆಬಾವಿ ಕೊರೆಸಲಾಗಿದ್ದು, ನೀರು ಬಾರದ ಕಾರಣ ಹಾಗೇ ಬಿಡಲಾಗಿದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ರಂಗಸ್ವಾಮಿ ಎಂಜಿನಿಯರ್ ಪ್ರಕಾಶ್ ಎಂಬುವರ ಗಮನಕ್ಕೆ ಆನೇಕ ಬಾರಿ ತಂದರೂ ಕ್ರಮ ಜರಿಗಿಸಿದೇ ನಿರ್ಲಕ್ಷ್ಯವಹಿಸಿದ್ದು ಇದುವರೆವಿಗೂ ಕೊಳವೆಬಾವಿ ಮಚ್ಚಿಸಿಲ್ಲವೆಂದು ವಾರ್ಡಿನ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿ, ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.