ತುಮಕೂರು: ಜಮೀನಿನ ಸರ್ವೇ ಸ್ಕೇಚ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸಿದ್ದ ಸರ್ವೆ ಸೂಪರ್ವೈಸರ್ ಒಬ್ಬರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ 2 ವರ್ಷ ಶಿಕ್ಷೆ ವಿಧಿಸಿ ತೀಪುಂ ನೀಡಿದೆ.
ಮಧುಗಿರಿ ತಾಲೂಕು ಶಂಭೋನಹಳ್ಳಿ ಗ್ರಾಮದ ಶಿವಕುಮಾರಸ್ವಾಮಿ ಎಂಬುವರಿಗೆ ಪಿತ್ರಾರ್ಜಿತವಾಗಿ ಬಂದ 20 ಎಕರೆ ಜಮೀನಿತ್ತು. ಇವರ ಅಣ್ಣತಮ್ಮಂದಿರು ವಿಭಾಗ ಮಾಡಿಕೊಳ್ಳಲು 2009ರಲ್ಲಿ ಪ್ರಯತ್ನಿಸಿ ಅದಕ್ಕಾಗಿ ಮಧುಗಿರಿ ತಾಲೂಕು ಕಚೇರಿಯ ಭೂಮಾಪನಾ ಕಚೇರಿಗೆ ಸರ್ವೆ ಸ್ಕೆಚ್ಗಾಗಿ ಅರ್ಜಿ ಸಲ್ಲಿಸಿದ್ದರು. 20 ಎಕರೆ ಜಮೀನಿನ ಅಳತೆ ಮಾಡಿ ಸರ್ವೆ ಸ್ಕೆಚ್ ನೀಡಬೇಕಾದರೆ ರು. 24 ಸಾವಿರ ನೀಡಬೇಕೆಂದು ಮಧುಗಿರಿಯಲ್ಲಿ ಕಾರ್ಯನಿರ್ವಹಿಸಿದ್ದ ಸರ್ವೆ ಸೂಪರ್ವೈಸರ್ ಬಿ. ವೆಂಕಟರವಣಪ್ಪ ಒತ್ತಾಯಿಸಿದ್ದರು. ಅಷ್ಟನ್ನು ಕೊಡಲು ಒಪ್ಪದ ಶಿವಕುಮಾರಸ್ವಾಮಿ ರು. 12 ಸಾವಿರ ನೀಡಲು ಒಪ್ಪಿದ್ದರು.
ಆದರೆ, ಲಂಚದ ಹಣ ಕೊಡಲು ಮನಸ್ಸು ಒಪ್ಪದ ಶಿವಕುಮಾರಸ್ವಾಮಿ ಏಪ್ರಿಲ್ 6 ರಂದು ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಮಧುಗಿರಿ ಭೂಮಾಪನಾ ಕಚೇರಿಗೆ ತೆರಳಿ ಲಂಚದ ಹಣ ಪಡೆಯುತ್ತಿದ್ದಾಗ ವೆಂಕಟರವಣಪ್ಪರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದರು.
ಈ ಪ್ರಕರಣದ ವಿಚಾರಣೆಯು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪಿತರು ಲಂಚ ಸ್ವೀಕರಿಸಿರುವುದು ಸಾಬೀತಾಗಿದ್ದರಿಂದ ಲಂಚ ನಿರ್ಮೂಲನೆ ಕಾಯಿದೆ ಕಲಂ 7 ರ ಪ್ರಕಾರ 6 ತಿಂಗಳು ಕಠಿಣ ಸಜೆ ಮತ್ತು 5 ಸಾವಿರ ರು. ದಂಡ, ಕಲಂ 13 (2)ರ ಅಪರಾಧಕ್ಕೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ರು. ದಂಡ ವಿಧಿಸಿ ನ್ಯಾಯಾಧೀಶ ಜೆ.ಎಂ. ಖಾಜಿ ತೀರ್ಪು ನೀಡಿದ್ದಾರೆ.
ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಎಂ. ಷಹಜಾಬಿ ಲೋಕಾಯುಕ್ತ ಪೊಲೀಸರ ಪರ ವಾದಿಸಿದ್ದರು.