ಪಾವಗಡ: ಮೂರು ಭಾರಿ ನೋಟಿಸ್ ಜಾರಿ ಮಾಡಿದರೂ ರಸ್ತೆ ಒತ್ತುವರಿ ತೆರವುಗೊಳಿಸದ ಕಾರಣ ಜೆಸಿಬಿಯಿಂದ ಮನೆಗಳನ್ನು ಒಡೆದ ಪ್ರಸಂಗ ಬುಧವಾರ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.
ಪಟ್ಟಣದ ಪ್ರತಿಷ್ಠಿತ ಬಡಾವಣೆ ವಿನಾಯಕ ನಗರದಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಟ್ಟ 6 ಅಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿತ್ತು. ಮತ್ತೆಕೆಲವರು ಅದೇ ರಸ್ತೆಗೆ ಅಡ್ಡಲಾಗಿ ಮನೆಗಳ ಮುಂದೆ ಕಾಂಪೌಂಡ್ ನಿರ್ಮಿಸಿಕೊಂಡು ಸಾರ್ವಜನಿಕರ ಒಡಾಟಕ್ಕೆ ತೊಂದರೆ ಪಡಿಸುತ್ತಿದ್ದರು. ಬಡವಾಣೆಯ ವ್ಯಕ್ತಿಯೊಬ್ಬರು ತೆರವಿಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು ಆದೇಶದ ಮೇರೆಗೆ ಕ್ರಮ ಜರಿಗಿಸಿದ ಪುರಸಭೆ ಮುಖ್ಯಾಧಿಕಾರಿ ರಂಗಸಾಮಯ್ಯ ಕೆಎಸ್ಆರ್ಪಿ ತುಕಡಿ ಸೇರಿದಂತೆ ಸುಮಾರು 50 ಪೊಲೀಸರ ಬಂದೋಬಸ್ತಿನಲ್ಲಿ ವಾರ್ಡಿಗೆ ತೆರಳಿ ಪುರಸಭೆಯ ರಸ್ತೆ ಒತ್ತುವರಿ ಮಾಡಿಕೊಂಡ ಸುಮಾರು 6 ಮನೆಗಳನ್ನು ಜೆಸಿಬಿಯಿಂದ ತೆರವುಗೊಳಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮುಖ್ಯಾಧಿಕಾರಿ ರಂಗಸಾಮಯ್ಯ, ಮಾತನಾಡಿ ಸಾರ್ವಜನಿಕ ಒಡಾಟಕ್ಕೆ ಪುರಸಭೆ ವತಿಯಿಂದ ಪಟ್ಟಣದ ವಿನಾಯಕ ನಗರದಲ್ಲಿ 20ಅಡಿ ರಸ್ತೆ ಬಿಡಲಾಗಿದ್ದು ಇದರಲ್ಲಿ 6ಅಡಿ ರಸ್ತೆ ಒತ್ತುವರಿ ಮಾಡಿಕೊಂಡು ಮನೆಗಳ ಮುಂದೆ ಮೆಟ್ಟಲು ಮತ್ತು ಕಾಂಪೌಂಡ್ ನಿರ್ಮಾಣ ಮಾಡಿಕೊಂಡ ಕಾರಣ ಸಾರ್ವಜನಿಕ ಓಡಾಟಕ್ಕೆ ತೀವ್ರ ತೊಂದರೆ ಆಗಿತ್ತು. ತೆರವುಗೊಳಿಸಲು ಆಕ್ರಮ ಒತ್ತುವರಿ ಮಾಡಿಕೊಂಡ ವಾರ್ಡಿನ ನರಸಿಂಹಪ್ಪ, ಲಕ್ಷ್ಮೀಕಾಂತಮ್ಮ,ನರಸಿಂಹಪ್ಪ,ಶ್ರೀರಾಮಪ್ಪ,ಸುಬ್ಬರಾಯಪ್ಪ ಗಂಗಲಕ್ಷ್ಮಮ್ಮ ಹಾಗೂ ನಾಗಭೂಷಣ ಎಂಬುವರಿಗೆ ಇಲಾಖೆಯಿಂದ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ತೆರವು ಗೊಳಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಕ್ರಮ ಕೈಗೊಂಡು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.