ತಿಪಟೂರು: ಪಟ್ಟಣದ ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ 13ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ. ಸಂಘದ ವ್ಯಾಪ್ತಿಯಲ್ಲಿ ಬರುವ ತಿಪಟೂರು, ತುರುವೇಕೆರೆ, ಚಿ.ನಾ.ಹಳ್ಳಿ ತಾಲೂಕುಗಳಲ್ಲಿ 2014ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಶ್ವಕರ್ಮ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಗುವುದು. ಪರೀಕ್ಷೆಯಲ್ಲಿ ಶೇ.75ರಷ್ಟು ಅಂಕಗಳಿಸಿ ಉತ್ತೀರ್ಣರಾಗಿರಬೇಕು. ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪತ್ರ ಹಾಗೂ ಸ್ವ-ವಿಳಾಸದೊಂದಿಗೆ ಅರ್ಜಿಯನ್ನು ಸೆಪ್ಟಂಬರ್ 9ರೊಳಗೆ ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘ, ಎಸ್.ಕೆ.ಪಿ.ಟಿ.ರಸ್ತೆ ದೊಡ್ಡಪೇಟೆ ತಿಪಟೂರು ಇಲ್ಲಿಗೆ ತಲುಪಿಸಬೇಕು. ನಂತರ ಬಂದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ. ಸಂಘದ ತೀರ್ಮಾನವೇ ಅಂತಿಮ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಮಾಹಿತಿಗೆ 9916775922, 8762933229.
ಶ್ರೀ ಶಂಕರೇಶ್ವರಸ್ವಾಮಿ ನೂತನ
ದೇಗುಲ ಪ್ರಾರಂಭೋತ್ಸವ ಇಂದು
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಪಟ್ರೇಹಳ್ಳಿ ಮತ್ತು ವಿಠಲಾಪುರ ಗ್ರಾಮದ ಶ್ರೀ ಶಂಕರೇಶ್ವರಸ್ವಾಮಿ ನೂತನ ದೇವಾಲಯ ಪ್ರಾರಂಭೋತ್ಸವ, ಶಿಖರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭ ಇಂದಿನಿಂದ ಆ.9 ರವೆರೆಗೆ ನಡೆಯಲಿದೆ. ಇಂದು ಗೋಪೂಜೆ, ಗಂಗಾಪೂಜೆ ಹಾಗೂ ಭಜನಾ ಕಾರ್ಯಕ್ರಮಗಳಿರುತ್ತವೆ. ಆ. 8ರಂದು ನೂತನ ವಿಗ್ರಹ ಪ್ರತಿಷ್ಠಾಪನೆ, ಶ್ರೀ ಶಂಕರೇಶ್ವರ ಸ್ವಾಮಿಗೆ ಅಭಿಷೇಕ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಆ.9ರಂದು ಧಾರ್ಮಿಕ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯ ಅರಸಿಕೆರೆ ಮಾಡಾಳು ಶ್ರೀ ರುದ್ರಮುನಿಸ್ವಾಮೀಜಿ, ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಶಿವಪ್ರಕಾಶ ಸ್ವಾಮೀಜಿ ಮತ್ತಿತರರು ವಹಿಸಲಿದ್ದಾರೆ.
ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ
ಶಿರಾ: ಸಾಲಕ್ಕೆ ಹೆದರಿ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೇಜಯಂತಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ದೇವರಾಜ(37) ಎನ್ನುವಾತ ಜೀವನ ನಿರ್ವಹಣೆಗಾಗಿ ಬಹಳಷ್ಟು ಕೈ ಸಾಲ ಮಾಡಿಕೊಂಡಿದ್ದು, ತೀರಿಸುವ ಬಗೆ ತಿಳಿಯದೆ, ಚಿಂತೆಯಲ್ಲಿ ಜುಗುಪ್ಸೆಗೊಂಡು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವ ಪ್ರಬಂಧ ಸ್ಪರ್ಧೆ
ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಅನನ್ಯ ಪ್ರಕಾಶನ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮೂಹ ಮಾಧ್ಯಮಗಳು ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ನಾಲ್ಕು ಪುಟಗಳಿಗೆ ಮೀರದಂತೆ ಈ ಕೆಳಕಂಡ ವಿಳಾಸಕ್ಕೆ ಆಗಸ್ಟ್ 14 ರೊಳಗೆ ಪ್ರಬಂಧ ಕಳುಹಿಸಿಕೊಡಬಹುದು.
ಎಂ.ಸಿ. ಲಲಿತಾ, ಅಧ್ಯಕ್ಷರು, ಅನನ್ಯ ಪ್ರಕಾಶನ, ನಿಸರ್ಗ, ಮುನಿಸಿಪಲ್ ಲೇಔಟ್, ಸಿದ್ಧಗಂಗಾ ಬಡಾವಣೆ, ತುಮಕೂರು. ಮೊಬೈಲ್ 9880113462 ಸಂಪರ್ಕಿಸಲು ಕೋರಿದ್ದಾರೆ.