ಚಿಕ್ಕನಾಯಕನಹಳ್ಳಿ: ಪ್ರಕೃತಿ ಸೃಷ್ಟಿ, ದೈವ ನಿಯಮವಾದ ಎದೆಹಾಲು ಸರ್ವರೋಗ ನಿವಾರಕವಾಗಿದ್ದು, ಅಮೃತ ಸಮಾನವಾಗಿದೆ ಎಂದು ಡಾ. ಚಂದನ ನುಡಿದರು.
ಅವರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕೆಲ ತಾಯಂದಿರು ಸೌಂದರ್ಯ ಹಾಳಾಗುತ್ತದೆಂಬ ಭ್ರಮೆಗೆ ಬಿದ್ದು ಮಕ್ಕಳನ್ನು ಎದೆಹಾಲಿನಿಂದ ವಂಚಿಸುತ್ತಾರೆ. ತಾಯಿಯ ಎದೆಯನ್ನು ಮಗು ಕಚ್ಚಿ ಹೀರುವುದರಿಂದ ತಾಯಂದಿರ ಸೌಂದರ್ಯ ವೃದ್ಧಿಸುತ್ತದೆ. ಹೆರಿಗೆಯಾದ ನಂತರ ಮಗು ಎದೆ ಹಾಲು ಕುಡಿಯುವುದರಿಂದ ಸರ್ವರೋಗ ನಿರೋಧಕ ಶಕ್ತಿ ಮಗುವಿನಲ್ಲಿ ಉಂಟಾಗುತ್ತದೆ. ಎಂದರು.
ತಾಯಿಯ ಮನಸ್ಥಿತಿಯ ಮೇಲೆ ಎದೆ ಹಾಲು ಉತ್ಪತ್ತಿಯಾಗುವುದರಿಂದ ಬಾಣಂತಿಯರು ಉದ್ವೇಗ, ಆತಂಕ, ಕೋಪತಾಪಗಳಿಗೆ ತುತ್ತಾಗಬಾರದು. ಇದರಿಂದ ಮಗುವಿಗೆ ಎದೆ ಹಾಲು ವಂಚಿಸಿದಂತಾಗುತ್ತದೆ. ಯಾವುದೇ ಬಾಣಂತಿಗೆ ಯಾವುದೇ ತರಕಾರಿ ನಿಷಿದ್ಧವಲ್ಲ. ಹೆಚ್ಚುಹೆಚ್ಚು ತರಕಾರಿ ತಿನ್ನುವುದರಿಂದ ಹೆಚ್ಚು ಎದೆಹಾಲು ಉತ್ಪತ್ತಿಯಾಗುತ್ತದೆ ಎಂದರು.
ತಾಪಂ ಅಧ್ಯಕ್ಷೆ ಎಂ.ಇ. ಲತಾಕೇಶವಮೂರ್ತಿ, ಜಿಪಂ ಸದಸ್ಯೆ ಲೋಹಿತಾಬಾಯಿ, ತಾಪಂ ಉಪಾಧ್ಯಕ್ಷ ಆರ್.ವಸಂತಯ್ಯ, ಸಿಡಿಪಿಒ ಅನೀಸ್ ಖೈಸರ್, ಎಸಿಡಿಪಿಒ ಪರಮೇಶ್ವರಪ್ಪ ಭಾಗವಹಿಸಿದ್ದರು.
ತಿಪಟೂರು: ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಹಾಗೂ ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯ ಎದೆಹಾಲು ತುಂಬಾ ಶ್ರೇಷ್ಟಕರ. ತನ್ನ ಮಗುವಿಗೆ ಪೂರ್ಣ ಅವಧಿಯವರೆಗೆ ಎದೆ ಹಾಲು ನೀಡುವತ್ತ ತಾಯಂದಿರು ಗಮನಹರಿಸಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕವಿತಾ ತಿಳಿಸಿದರು.
ತಾಲೂಕಿನ ಕುಪ್ಪಾಳು ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ, ಪ್ರಜಾಯತ್ನ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಇವರ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಾಯಂದಿರು ಮೂಢನಂಬಿಕೆಗಳಿಗೆ ಒಳಗಾಗಿ ಮಕ್ಕಳಿಗೆ ಬಾಟಲಿ ಹಾಲು ನೀಡುವುದನ್ನು ನಿಲ್ಲಿಸಬೇಕು. ತಾಯಿಯ ಎದೆಹಾಲಿನಲ್ಲಿ ಪ್ರೊಟಿನ್, ಜೀವಸತ್ವ, ಖನಿಜಾಂಶಗಳು, ಕ್ಯಾಲ್ಸಿಂ ಇತ್ಯಾದಿ ಪೌಷ್ಠಿಕಾಂಶಗಳಿದ್ದು, ಕಡ್ಡಾಯವಾಗಿ ಮಗುವಿಗೆ ಎದೆಹಾಲು ನೀಡಬೇಕೆಂದರು.
ಉಪನ್ಯಾಸ ನೀಡಿದ ಡಾ.ಸುದರ್ಶನ್, ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದುದು. ತಾಯಿ ತನ್ನ ಮಗುವಿಗೆ ಹುಟ್ಟಿದ ಒಂದು ಗಂಟೆಯಿಂದಲೇ ಹಾಲು ಕೊಡಲು ಪ್ರಾರಂಭಿಸಬೇಕು. ಈ ಹಾಲಿನಲ್ಲಿ ಮಗುವಿಗೆ ಬೇಕಾದ ರೋಗನಿರೋಧಕ ಶಕ್ತಿ ಅಂಶವಿರುತ್ತದೆ.
ಬಿಳಿಗೆರೆ ವೃತ್ತದ ಮೇಲ್ವಿಚಾರಕಿ ಲೀಲಾಬಾಯಿ, ಗ್ರಾ.ಪಂ.ಸದಸ್ಯ ಕೆ.ಬಿ.ಪ್ರಸಾದ್, ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 80ಕ್ಕೂ ಹೆಚ್ಚು ತಾಯಂದಿರು ಭಾಗವಹಿಸಿದ್ದರು.