ಕಾರಿಗೆ ವೋಲ್ವೋ ಬಸ್ ಡಿಕ್ಕಿ ಸಚಿವರ ಪತ್ನಿ ಸೋದರಿ ಸಾವು
ಬೆಂಗಳೂರು: ಪಂಚರ್ ಆಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಬಿಎಂಟಿಸಿ ವೋಲ್ವೋ ಬಸ್ ಡಿಕ್ಕಿ ಹೊಡೆದು ಕಾರಿನಲ್ಲಿ ಕುಳಿತಿದ್ದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಪತ್ನಿಯ ಸಹೋದರಿ ಮೃತಪಟ್ಟಿರುವ ಘಟನೆ ಅಗರ ಮೇಲ್ಸೆತುವೆ ಮೇಲೆ ಶನಿವಾರ ಬೆಳಗ್ಗ ಸಂಭವಿಸಿದೆ.
ಚಿತ್ರದುರ್ಗ ಮೂಲದ ಸೀತಮ್ಮ (55) ಮೃತ ದುರ್ದೈವಿ. ಸೀತಮ್ಮ ಸಹೋದರಿ ಸಾವಿತ್ರಮ್ಮ (56) ಹಾಗೂ ಸಂಬಂಧಿ ಶಾಂತಮ್ಮ (50) ಎಂಬುವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರು ಖಾಸಗಿ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ ಸಾವಿತ್ರಮ್ಮ ಅವರ ಮಗಳ ಮದುವೆ ನಿಶ್ಚಯವಾಗಿದ್ದು ಲಗ್ನ ಪತ್ರಿಕೆ ಹಂಚಲು ಶುಕ್ರವಾರವಷ್ಟೇ ಸೀತಮ್ಮ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದರು. ಸಾವಿತ್ರಮ್ಮ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದ ಸೀತಮ್ಮ ಅವರು ಶನಿವಾರ ಬೆಳಗ್ಗೆ ಸಂಬಂಧಿ ಶಾಂತಮ್ಮ ಸೇರಿ ಮೂವರು ಲಗ್ನ ಪತ್ರಿಕೆ ಹಂಚಲು ಕಾರಿನಲ್ಲಿ ಹೋಗುತ್ತಿದ್ದರು.
ಕಾರು ಅಗರ ಮೇಲ್ಸೆತುವೆ ಬಳಿ ಹೋದಾಗ ಪಂಚರ್ ಆಗಿದೆ. ಹೀಗಾಗಿ ಚಾಲಕ ಕಾರನ್ನು ಮೇಲ್ಸೆತುವೆ ಒಂದು ಬದಿಯಲ್ಲಿ ನಿಲ್ಲಿಸಿ ಇಂಡಿಕೇಟರ್ ಹಾಕಿ ಸ್ಟೆಪ್ನಿ ಟೈರ್ ತರಲು ಹೋಗಿದ್ದ. ಈ ವೇಳೆ ಸೀತಮ್ಮ ಸೇರಿದಂತೆ ಮೂವರು ಕಾರಿನಲ್ಲೇ ಕುಳಿತಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್ಸೊಂದು ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಿ ಕಾರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮಾರ್ಗ ಮಧ್ಯೆ ಸೀತಮ್ಮ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಸ್ ಚಾಲಕನನ್ನು ಬಂಧಿಸಲಾಗಿದೆ.