ಸರ್ಕಾರಿ ಶಾಲೆಗಳು ಗ್ರಾಮಾಂತರ ಪ್ರದೇಶದ ಅವಿಭಾಜ್ಯ ಅಂಗ
ಕುಣಿಗಲ್: ಸರ್ಕಾರಿ ಶಾಲೆಗಳು ಗ್ರಾಮಾಂತರ ಪ್ರದೇಶದ ಜನಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅವಿಭಾಜ್ಯ ಅಂಗವಾಗಿದೆ. ಶಿಕ್ಷಕರು ಈ ಶಾಲೆಗಳ ಪಾವಿತ್ರ್ಯತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು ಕಿತ್ತನಾಗಮಂಗಲ ಅರೇಶಂಕರ ಮಠದ ಸಿದ್ದರಾಮಚೈತನ್ಯ ಸ್ವಾಮಿಜಿ ತಿಳಿಸಿದರು. ಶನಿವಾರ, ತಾಲೂಕಿನ ಕೆಂಪಸಾಗರ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಖಾಸಗಿ ಶಾಲೆಗಳು ನೀಡುವ ಪೈಪೋಟಿಯನ್ನು ಸರ್ಕಾರಿ ಶಾಲೆಗಳು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಮಹತ್ತರ ಹೊಣೆಗಾರಿಕೆ ಹೊರಬೇಕಿದೆ. ಮಕ್ಕಳನ್ನು ಕೇವಲ ಪಠ್ಯಾಧಾರಿತ ವಿಷಯದ ರೀತಿಯಲ್ಲೆ ತರಬೇತುಗೊಳಿಸದೆ ಅವರು ಜೀವನದ ಎಲ್ಲಾ ಮಜಲುಗಳನ್ನು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಸಿದ್ಧತೆಗೊಳಿಸಬೇಕಿದೆ ಎಂದರು.