ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇದ್ದೂ ಇಲ್ಲದಂತಾಗಿರುವ ವಿಭಾಗ ದಾಖಲಾತಿಗಳ ಕೊಠಡಿ

Rashmi Kasaragodu
Updated On : 3 Feb 2014, 12:55 pm

ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ರೈತನಿಗೆ ಅತ್ಯಂತ ಅವಶ್ಯಕವಾದ ವಿಭಾಗ ದಾಖಲಾತಿಗಳ ಕೊಠಡಿ ಇದ್ದು ಇಲ್ಲದಂತಾಗಿದೆ. ಕಚೇರಿಯ ವೇಳೆಯಲ್ಲಿ ಸದಾ ತೆರೆದಿದ್ದು ರೈತನ ಅವಶ್ಯಕತೆಗಳನ್ನು ಪೂರೈಸಬೇಕಾದ ವಿಭಾಗ ಮುಚ್ಚಿರುತ್ತದೆ. ತಾಲೂಕಿನ ಗಡಿ ಭಾಗಗಳಿಂದ ತಾಲೂಕು ಕೇಂದ್ರಕ್ಕೆ ಬರುವ ರೈತನಿಗೆ ಮುಚ್ಚಿದ ಕೊಠಡಿಯ ಬಾಗಿಲು ಸ್ವಾಗತಿಸುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳಲ್ಲಿ ವಿಚಾರಿಸಿದರೆ ಸಿಬ್ಬಂದಿಯ ಕೊರತೆ ನೆಪವೊಡ್ಡುತ್ತಾರೆ. ಆದರೆ ಇವರಾರಿಗೂ ರೈತನ ಕಷ್ಟದ ಪರಿಸ್ಥಿತಿ ಅರ್ಥವಾಗುವುದಿಲ್ಲ. ತಮ್ಮ ಅಮೂಲ್ಯವಾದ ಸಮಯ ಮತ್ತು ಬರದ ಬೇಗೆಯಲ್ಲಿ ಬೇಯುತ್ತಿದ್ದರೂ  ನೂರಾರು ರು.ಗಳನ್ನು ಖರ್ಚುಮಾಡಿಕೊಂಡು ಬರುವ ತಮ್ಮ ಕೆಲಸಕಾರ್ಯಗಳನ್ನು  ಈಡೇರಿಸಿಕೊಳ್ಳಲು ಮಧ್ಯವರ್ತಿಗಳ ಬಲೆಗೆ ಬೀಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.



ಅವ್ಯವಸ್ಥೆಯ ಆಗರ ಚಿ.ನಾ.ಹಳ್ಳಿ ತಾಲೂಕು ಕಚೇರಿ
ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ತಾಲೂಕಿನ ಮೂಲೆಮೂಲೆಗಳಂದ ಬರುವ ಜನರ ಅಗತ್ಯ ಕೆಲಸ ಕಾರ್ಯಗಳು ಸುಸೂತ್ರವಾಗಿ ಪರಿಹಾರ ಕಾಣದೆ ಜನತೆ ಇಡೀ ವ್ಯವಸ್ಥೆಯ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಮಿನಿವಿಧಾನಸೌಧದ ಅವ್ಯವಸ್ಥೆ (ಸಿಬ್ಬಂದಿ ಕೊರತೆ) ಸೇರಿ ತಾಲೂಕಿನ ಮೂಲೆಮೂಲೆಗಳಿಂದ ತಮ್ಮ ಜೀವನಾಧಾರವಾದ ಜಮೀನುಗಳ ಮತ್ತು ಇತರೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬರುವ ಜನರಿಗೆ ಸಮಸ್ಯೆಗಳ  ಪರಿಹಾರ ಕಾಣದೆ ಪರಿತಪಿಸುವಂತಾಗಿದೆ.
ಈಗಾಗಲೇ ತಾಲೂಕು ಕಚೇರಿ ಬಗ್ಗೆ ಇರುವ ಹಲವಾರು ಸಮಸ್ಯೆಗಳ ಬಗ್ಗೆ ತವಿಸೀಲ್ದಾರ್ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದರೂ ಸಂಬಂಧಪಟ್ಟವರು ಕ್ಯಾರೇ ಅನ್ನುತ್ತಿಲ್ಲ. ಪ್ರತಿ ನಿತ್ಯ ನೂರಾರು ಮಂದಿ ಈ ತಾಲೂಕು ಕಚೇರಿಗೆ ಎಡತಾಕುತ್ತಾರೆ. ಆದರೆ ತಾಲೂಕು ಕಚೇರಿಯ ಅವ್ಯವಸ್ಥೆಯಿಂದಾಗಿ ಜನ ಬಸವಳಿದು ಹೋಗಿದ್ದಾರೆ.


ಖಾಲಿ ಕುರ್ಚಿಗಳ ಸ್ವಾಗತ...
ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿರುವ ಸಿಬ್ಬಂದಿಗೆ ಕೆಲಸದ ವೇಳೆಯೆಂಬ ಪರಿವೆಯೆಂಬುದೇ ಇಲ್ಲವಾಗಿದೆ. ರೈತರು ತಮ್ಮ ಅಹವಾಲುಗಳನ್ನು ಹಿಡಿದು ಬಹುನಿರೀಕ್ಷೆಯಿಂದ ಕಾಲೆಳೆದುಕೊಂಡು ಬಂದರೆ ಇಲ್ಲಿ ಅವರನ್ನು ಖಾಲಿಯಿರುವ ಕುರ್ಚಿಗಳು ಸ್ವಾಗತಿಸುವುದು ನಿತ್ಯದ ದೃಶ್ಯವಾಗಿದೆ.
ತಮ್ಮ ಕೆಲಸ ಮಾಡಿಕೊಡಬೇಕಾದ ಗುಮಾಸ್ತರ ಬಗ್ಗೆ ಕಚೇರಿಯ ಡಿ ಗ್ರೂಪ್ ನೌಕರನನ್ನು ವಿಚಾರಿಸಿದರೆ ನಮಗೆ ಗೊತ್ತಿಲ್ಲವೆಂಬ ಸಿದ್ಧ ಉತ್ತರ ಬಿಟ್ಟರೆ ಬೇರೇನು ದೊರೆಯುವುದಿಲ್ಲ. ಇಲ್ಲಿನ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕೆಲಸದ ವೇಳೆಯಲ್ಲಿ ಕಾಫಿ, ಟೀಗೆಂದು ಹೊರಗೆ ಹೋದರೆ, ಮತ್ತೆ ಕುರ್ಚಿಗೆ ಬರುವುದು ಗಂಟೆಗಟ್ಟಲೆ ಸಮಯವಾಗುತ್ತದೆ. ಕಚೇರಿಯಲ್ಲಿ ಸಿಬ್ಬಂದಿಯ ಮೇಲೆ ಮೇಲಧಿಕಾರಿಗಳಿಗಾಗಲಿ ಮತ್ತು ತಹಸೀಲ್ದಾರರಿಗಾಗಲಿ ಹಿಡಿತವಿಲ್ಲದಿರುವುದು ಇದರಿಂದ ಗೋಚರಿಸುತ್ತದೆ ಎನ್ನುವುದು ಸಾರ್ವಜನಿಕರ ದೂರಾಗಿದೆ.
ಇದರ ಪರಿಣಾಮ ಅಮಾಯಕ ಅರ್ಜಿದಾರರ ಮೇಲೆ ಬೀರಿದ್ದು ಇಲ್ಲಿಯು ಸಹ ಆತನ ಮಧ್ಯವರ್ತಿಗಳ ಸುಲಿಗೆಗೆ ದಾರಿಯಾಗಿದೆ ಎನ್ನುವುದು ಜನರ ದೂರಾಗಿದೆ.



ಶಾಸಕರ ಕಚೇರಿಯಲ್ಲಿ ಸರ್ಕಾರಿ ಸಹಾಯಕರನ್ನು ನೇಮಿಸಿ


ಪಾವಗಡ: ಸಾರ್ವಜನಿಕರ ಸಂಪರ್ಕಕ್ಕಾಗಿ ಶಾಸಕರ ಕಚೇರಿಯಲ್ಲಿ ಸರ್ಕಾರಿ ಸಹಾಯಕರನ್ನು ನೇಮಿಸಿ ಎಂದು ಶಾಸಕರಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ. ಕೆ.ಎಂ. ತಿಮ್ಮರಾಯಪ್ಪ ಅವರು ಶಾಸಕರಾಗಿ ಆಯ್ಕೆಯಾಗಿ ಸುಮಾರು 1ವರ್ಷ ಕಳೆದರೂ ಶಾಸಕರು ತಮ್ಮ ಕಚೇರಿಯಲ್ಲಿ ಸರ್ಕಾರಿ ಸಹಾಯಕರನ್ನು ಇದುವರೆವಿಗೂ ನಿಯೋಜಿಸದ ಕಾರಣ ಶಾಸಕರ ವ್ಯಾಪ್ತಿಗೆ ಸಂಬಂಧಪಟ್ಟ ಮಾಹಿತಿ ಹಾಗೂ ಶಾಸಕರ ಕಚೇರಿಗೆ ಸಂಬಂಧಿಸಿದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ದೂರಿದ್ದು ತಾಪಂನಲ್ಲಿ ಶಾಸಕರ ಕಚೇರಿ ಇದ್ದರೂ ಕಚೇರಿಗೆ ಸರ್ಕಾರಿ ಸಹಾಯಕರನ್ನು ನಿಯೋಜಿಸದ ಕಾರಣ ಕೆಲಸ ಕಾರ್ಯಗಳಿಗೆ ಪರದಾಟ ಪಡಬೇಕಿದೆ. ಶಾಸಕರ ಕಚೇರಿಗೆ ಸದಾ ಬೀಗ ಜಡಿದಿರುವುದಲ್ಲದೇ ಶಾಸಕರು ಬಂದರೆ ಮಾತ್ರ ಕಚೇರಿ ಬಾಗಿಲು ತೆರೆದಿರುತ್ತದೆ. ಇಲ್ಲವಾದರೆ ತಿಂಗಳಾದರೂ ಸರಿ ಶಾಸಕರ ಕಚೇರಿ ಬಾಗಿಲು ಮುಚ್ಚಿದ್ದು ಮುಚ್ಚಿದ ಹಾಗೇ ಇರುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement