ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಿಟಿಯಲ್ಲಿ ಆನೆಗಳ ಮಾರ್ನಿಂಗ್ ವಾಕ್

Rashmi Kasaragodu
Updated On : 3 Feb 2014, 12:56 pm

ಕನ್ನಡಪ್ರಭ ವಾರ್ತೆ, ತುಮಕೂರು, ಫೆ.2
ಕಳೆದ ಎರಡು ವಾರಗಳಿಂದ ದೂರದೂರದ ಕೆರೆಗಳಲ್ಲಿ ಬೀಡು ಬಿಟ್ಟಿದ್ದ 3 ಆನೆಗಳು ಭಾನುವಾರ ಬೆಳಗ್ಗೆ ತುಮಕೂರು ಸಿಟಿಗೂ ನುಗ್ಗಿ ಸುಮಾರು 2 ಗಂಟೆಗಳ ಕಾಲ ವಾಕಿಂಗ್ ನಡೆಸಿದವು.
9 ಆನೆಗಳ ಹಿಂಡಿನಿಂದ ಬೇರ್ಪಟ್ಟ ಮೂರು ಗಂಡು ಆನೆಗಳು ನಗರ ಒಳಕ್ಕೆ ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿತು ಕಳೆದ ಮೂರು ತಿಂಗಳಿಂದ ಆನೆಗಳು ತುಮಕೂರು ಜಿಲ್ಲೆಗೆ ಬರುವುದು ಹೋಗುವುದೇ ನಡೆದೇ ಇದ್ದು, ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ 9 ಕಾಡಾನೆಗಳಲ್ಲಿ ಶನಿವಾರದಂದು ಆರು ಆನೆಗಳು ಗಂಗಸಂದ್ರ ಕೆರೆಯಲ್ಲಿ ಬೀಡುಬಿಟ್ಟಿದ್ದರೆ, ಮೂರು ಆನೆಗಳು ಗೂಳೂರು ಕೆರೆಯಲ್ಲಿ ತಂಗಿದ್ದವು.
11.45 ಕ್ಕೆ ಸಿಟಿ ಪ್ರವೇಶ: ಗೂಳೂರು ಕೆರೆಯಲ್ಲಿದ್ದ ಆನೆಗಳು ಆಹಾರ ಅರೆಸುತ್ತಾ ಶನಿವಾರ ರಾತ್ರಿ 11.45 ರ ಸುಮಾರಿಗೆ ಹನುಮಂತರಾಯ ಅವರ ತೋಟದ ಮೂಲಕ ವರ್ತುಲ ರಸ್ತೆಯ ರೋಟಿಘರ್ ಸಮೀಪ ಆಗಮಿಸಿ ಅಲ್ಲಿಂದ ವಿಜಯನಗರದತ್ತ ಹೊರಟು ರೇಲ್ವೆ ಹಳಿ ದಾಟಿ ರಾತ್ರಿ 2 ಗಂಟೆ ಸುಮಾರಿಗೆ ಎಸ್.ಐ.ಟಿ. ಕಾಲೇಜಿನ ಕ್ರೀಡಾಂಗಣದ ಕಾಂಪೌಂಡ್ ಗೋಡೆಯನ್ನು ಒಡೆದು ಒಳನುಗ್ಗಿ ಎಸ್.ಐ.ಟಿ. ಬ್ಯಾಕ್ ಗೇಟ್ನ ರಕ್ಷಣಾ ಗೋಡೆಯನ್ನು ಕಡೆವಿ ಅಲ್ಲಿಂದ ಎಸ್.ಐ.ಟಿ. ಮುಖ್ಯ ರಸ್ತೆಯಲ್ಲಿರುವ ತುಮಕೂರು ಪೆಟ್ರೋಲ್ ಬಂಕ್ ಬಳಿ ಬಂತು.
ಅಶೋಕ ನಗರಕ್ಕೂ ನುಗ್ಗಿದವು: ನಂತರ ಎಸ್.ಐ.ಟಿ. 9 ನೇ ಕ್ರಾಸ್ ಮೂಲಕ ಆಶೋಕ ನಗರದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಂತೆ ಇರುವ ಅಂಬಿಕಾ ಹೊಟೇಲ್ ಹಿಂಭಾಗಕ್ಕೆ ಬಂದು ನಿಂತವು. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಆರಣ್ಯ ಸಿಬ್ಬಂದಿ ಹಾಗೂ ಪೊಲೀಸರು ನಗರದಿಂದ ಆನೆಗಳನ್ನು ಹೊರಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಲಾಯಿತು.
ಗೇಟ್ ಮುರಿಯಿತು: ಇದಕ್ಕೆ ಬೆದರಿದ ಆನೆಗಳು ಅದೇ ರಸ್ತೆಯ ಮೂಲಕ ಎಸ್.ಐ.ಟಿ.ಮುಖ್ಯರಸ್ತೆಯ ಸಿದ್ದೇಶ್ವರ್ ಕನ್ವೆಷನ್ ಹಾಲ್ ಪಕ್ಕದ ರಸ್ತೆಯಿಂದ ವಾಸವಿ ಕಾಲೇಜಿನ ಮುಂಭಾಗದ ಗೇಟ್ ಮುರಿದುಕೊಂಡು ಒಳನುಗ್ಗಿ ರೇಲ್ವೆ ಗೇಟ್ ದಾಟಿ ವಿಜಯನಗರ ಹಾಗೂ ಶೆಟ್ಟಿಹಳ್ಳಿ ಮುಖ್ಯರಸ್ತೆ ದಾಟಿ ಮಾರುತಿ ಪಕ್ಕದಲ್ಲಿಯೇ ಇರುವ ಸಣ್ಣ ಕೆರೆ ಸೇರಿದ್ದವು. ಅಲ್ಲಿಂದಲೂ ಆನೆಗಳನ್ನು ಓಡಿಸಲು ಪ್ರಯತ್ನಿಸಿದ ಅರಣ್ಯ ಇಲಾಖೆಯ ಕ್ರಮದಿಂದ ಸಾಬರ ಪಾಳ್ಯದ ಮಾವಿನ ತೋಪಿಗೆ ಬಂದು ಸೇರಿದ ಆನೆಗಳು ಅಲ್ಲಿಂದ ಜಯನಗರ ವೆಂಕಟೇಶ್ವರ ದೇವಾಲಯ ಪಕ್ಕದಿಂದ ಗೆದ್ದಲಹಳ್ಳಿ ರಸ್ತೆ ದಾಟಿ ಸಣ್ಣ ಕೆರೆ ತಲುಪಿದವು.
ಅನಾಹುತ ಸಂಭವಿಸಿಲ್ಲ: ಆ ನಂತರ ಬೆಳಗ್ಗೆ 6 ಗಂಟೆ ಸುಮಾರಿಗೆ ಗುಬ್ಬಿ ಬೈಪಾಸ್ ರಸ್ತೆ ದಾಟಿ ಆಶ್ವಿನಿ ಆಯುರ್ವೇದ ಕಾಲೇಜು ಬಳಿಯಿಂದ ಸಾಗಿ ಮರಳೂರು ಕೆರೆ ಮೂಲಕ ಗೂಳೂರು ತಲುಪಿದವು. ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಫಲವಾಗಿ ಯಾವುದೇ ಅನಾಹುತ ಸಂಭವಿಸದೆ ಆನೆಗಳು ನಗರದಿಂದ ಹೊರಹೋಗುವ ಮೂಲಕ ಜನರಲ್ಲಿ ಉಂಟಾಗಿದ್ದ ಆತಂಕವನ್ನು ದೂರ ಮಾಡಿದವು.
ರಸ್ತೆ ಸಂಪರ್ಕ ಸ್ಥಗಿತ: ಆನೆಗಳು ನಗರಕ್ಕೆ ಬಂದಿರುವ ವಿಷಯ ತಿಳಿದು ಖುದ್ದು ಎ.ಎಸ್.ಪಿ ಅರ್. ಲಕ್ಷ್ಮಣ್, ನಗರ ಸಿಪಿಐ ಖಾದರ್, ತಿಲಕ್ ಪಾರ್ಕ್ ಸಿಪಿಐ ರಾಘವೇಂದ್ರ, ಕ್ಯಾತ್ಸಂದ್ರ ಸಿಪಿಐ ಸಿ.ಸಿ.ಗಿರಿ, ಪಿ.ಎಸ್.ಐ ಗಳಾದ ಚನ್ನಯ್ಯ ಹಿರೇಮಠ್, ರಾಧಾಕೃಷ್ಣ, ರವಿಕುಮಾರ್, ಅಂಬರೀಶ್, ಹನುಮಂತರಾಯಪ್ಪ, ಸಿದ್ದರಾಜು ಹಾಗೂ ಸಿಬ್ಬಂದಿಗಳು ತಮ್ಮ ವಾಹನ ಸಮೇತ ಆಗಮಿಸಿ ತಕ್ಷಣವೇ ಬಿ.ಹೆಚ್. ರಸ್ತೆ ಸಂಪರ್ಕ ಸ್ಥಗಿತಗೊಳಿಸಿ, ಆನೆಗಳು ಸಂಚರಿಸುವ ರಸ್ತೆಗಳಲ್ಲಿ ಜನರು ಹೊರಬರದಂತೆ ಧ್ವನಿವರ್ಧಕದ ಮೂಲಕ ಹೇಳಿ ಜಾಗೃತಿ ಮೂಡಿಸಿದ್ದೇ ಅಲ್ಲದೆ, ದ್ವಿಚಕ್ರ ವಾಹನಗಳಲ್ಲಿಯೂ ಪೊಲೀಸ್ ಸಿಬ್ಬಂದಿ ಜನರಲ್ಲಿ ಆನೆಗಳು ನಗರಕ್ಕೆ ಬಂದಿರುವ ವಿಷಯವನ್ನು ತಿಳಿಸಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿ ಅನಾಹುತ ನಡೆಯದಂತೆ ತಡೆದರು.
ಡೋಲು ಬಡಿತ: ಇದರ ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸೇರಿ ಪಟಾಕಿ ಸಿಡಿಸಿ, ಡೋಲು ಬಡಿಯುತ್ತಾ ಆನೆಗಳು ಹೋದ ದಾರಿಯನ್ನು ಹಿಂಬಾಲಿಸುತ್ತಾ ಸಾಗಿದ್ದು, ಆನೆಗಳು ನಗರದಿಂದ ಹೊರ ಹೋಗುವವರೆಗೂ ನಿರಂತರವಾಗಿ ಕಾರ್ಯಾಚರಣ ನಡೆಸಿ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದರು.
ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿ ಅಮರನಾಥ್, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ. ನರಸಿಂಹಮೂರ್ತಿ, ಬೋರೇಗೌಡ ಸೇರಿದಂತೆ 30 ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳನ್ನು ಗೂಳೂರು ಕೆರೆಗೆ ಮರಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇಡೀ ರಾತ್ರಿ ನಿದ್ದೆಗೆಟ್ಟು ಆನೆಗಳು ಹಾದಿ ತುಳಿದು ಅಂತಿಮವಾಗಿ ಗೂಳೂರು ಕೆರೆಗೆ ತಲುಪಿಸಿ ನಿಟ್ಟುಸಿರು ಬಿಟ್ಟರು.
ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹರಸಾಹಸದಿಂದ ಆನೆಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement