ಇಷ್ಟಪಟ್ಟು ಕಲಿತಾಗ ಉನ್ನತ ಫಲಿತಾಂಶ ಸಾಧ್ಯ
ತುಮಕೂರು: ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಬೇರೆಡೆಗೆ ಗಮನ ಕೊಡದೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದಾಗ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉನ್ನತ ಪಲಿತಾಂಶ ಪಡೆಯಲು ಸಾಧ್ಯ ಎಂದು ಶ್ರೀ ಸಿದ್ದಾರ್ಥ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ್ ಅಭಿಪ್ರಾಯಪಟ್ಟರು.
ನಗರದ ರವೀಂದ್ರ ಕಲಾನಿಕೇತನದಲ್ಲಿ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನದ ತಯಾರಿಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪರೀಕ್ಷೆಯ ವೇಳೆಯಲ್ಲಿ ಬೇರೆಡೆಗೆ ಗಮನ ಕೊಡದೆ ಓದಿನ ಕಡೆ ಗಮನವಿಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷೆಯನ್ನು ಎದುರಿಸಲು ಸುಲಭ ವಿಧಾನ ಎಂದು ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳು ವಾಸಿಸುವ ಪ್ರದೇಶಗಳಲ್ಲಿ ಹೊರಗಿನಿಂದ ಕೇಳುವ ಶಬ್ದಗಳು, ಅಹಿತಕರ ಘಟನೆಗಳಿಗೆ ಗಮನ ಕೊಡುವುದನ್ನು ಬಿಟ್ಟು ಮುಖ್ಯವಾದ ವಿಷಯದ ಕಡೆ ಗಮನಸಿ ಏಕಾಗ್ರತೆಯಿಂದ ಅಭ್ಯಾಸ ಮಾಡುವುದನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಬಡವರ್ಗ ಮಕ್ಕಳಿಂದ ಉತ್ತಮ ಸಾಧನೆ: ಬಡ ವರ್ಗದ ಕೂಲಿ ಕಾರ್ಮಿಕರ ಮಕ್ಕಳಿಗೆ ಸಾಮಾಜಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ವಸತಿ ಸಮಸ್ಯೆ, ಬಡತನ ಇವುಗಳನ್ನು ಲೆಕ್ಕಿಸದೆ ವಿದ್ಯಾಭ್ಯಾಸವನ್ನು ಮುಂದುವರೆಸಬೇಕಿದೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವರು ಬಡ ವರ್ಗದ ಮಕ್ಕಳೆ ಜಾಸ್ತಿ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ನಾಲ್ಕು ಗಂಟೆಗಳ ಕಾಲ ಓದಿನಲ್ಲಿ ನಿರಂತರಾಗಿ ನಂತರ 5ರಿಂದ 6 ಗಂಟೆಗಳ ಕಾಲ ನಿದ್ರೆ ಮಾಡುವುದಾಗಿ ಹಾಗೂ ಕ್ರೀಡೆಯಲ್ಲಿ ಒಂದು ಗಂಟೆಗಳ ಕಾಲ ತೊಡಗುವಂತೆ ಸಮಾಜದ ಅಭಿವೃದ್ಧಿಯ ಕಡೆಗೆ ವಿದ್ಯಾರ್ಥಿಗಳು ಗಮನ ವಹಿಸಬೇಕು. ವಿದ್ಯೆಯನ್ನು ಕಲಿಯುವಾಗ ಇಷ್ಟಪಟ್ಟು ಕಲಿಯಬೇಕು, ಕಷ್ಟ ಪಟ್ಟು ಕಲಿಯಬಾರದು. ವಿದ್ಯಾರ್ಥಿಗಳಿಗೆ ಆತ್ಮ-ವಿಶ್ವಾಸ ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ. ಬಸವಯ್ಯ ಮಾತನಾಡಿ ಬಡತನ ತಡೆಗೆ ಜಾಗೃತಿಯೇ ದಾರಿ. ಕಟ್ಟಡ ನಿರ್ಮಿಸುವ ಕಾರ್ಮಿಕರು ಮದ್ಯಪಾನ, ಧೂಮಪಾನ ಮತ್ತು ಕೆಟ್ಟ ಹವ್ಯಾಸಗಳಿಂದ ದೂರ ಉಳಿದು ತಮ್ಮ ಮಕ್ಕಳ ಜೀವನಕ್ಕೆ ಅವಶ್ಯಕವಾಗುವಂತೆ ಉತ್ತಮ ವಿದ್ಯಾಭ್ಯಾಸ ಕೊಡಿಸುವಲ್ಲಿ ಮುಂದಾಗಬೇಕಿದೆ ಎಂದರು.
ಉತ್ತಮ ಕೆಲಸ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಎಐಟಿಯುಸಿ ಸಂಘಟನೆ ತಿಳಿಸಿಕೊಡುವಲ್ಲಿ ಮುಂದಾಗಿರುವುದು ಉತ್ತಮವಾದ ಕೆಲಸವಾಗಿದೆ. ಎಐಟಿಯುಸಿ ಸಂಘಟನೆಯು ಕಟ್ಟಡ ಕಾರ್ಮಿಕರಿಗೆ ದೊರೆಯುವಂತಹ ಸವಲತ್ತುಗಳನ್ನು ಕೊಡಿಸುವುದರ ಜೊತೆಗೆ ಕಾರ್ಮಿಕರ ಅಭಿವೃದ್ಧಿಗೆ ಮುಂದೆಯು ಕೂಡ ಶ್ರಮಿಸಬೇಕು ಎಂದರು.
ಅಖಲ ಭಾರತ ವಿದ್ಯಾರ್ಥಿ ಸಂಘಟನೆಯ ರಾಜ್ಯ ಮುಖಂಡ ಸಂತೋಷ್ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು. ಶಿಕ್ಷಣದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಂಘಟನೆಯ ಮುಖಾಂತರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಹಾಗೂ ತುಮಕೂರು, ಶಿರಾ, ಮಧುಗಿರಿ, ಕೊರಟಗೆರೆ, ತಾಲೂಕು ಎಎಸ್ಎಫ್ಐ ಸಂಘಟನೆಯನ್ನು ಪ್ರಾರಂಭಿಸಿದರು.
ರಾಜ್ಯ ಸಹ ಕಾರ್ಯದರ್ಶಿ ಸಾ.ತಿ. ಸುಂದ್ರೇಶ್, ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಎಐವೈಎಫ್ನ ವಾಸುದೇವ್ ಕುಮಾರ್, ಆಶ್ವತ್ಥ ನಾರಾಯಣ್, ವೀರಣ್ಣ, ಚಂದ್ರಶೇಖರ್, ಶಶಿಕಾಂತ್, ಎಐಟಿಯುಸಿ ಗಿರೀಶ್, ಗೌಡರಂಗಪ್ಪ, ಚಿನ್ನಪ್ಪ.ವಿ, ಹಾಗೂ ವಿದ್ಯಾರ್ಥಿಗಳು, ಜಿಲ್ಲಾ ಮತ್ತು ತಾಲೂಕಿನಿಂದ ಬಂದಂತಹ ವಿದ್ಯಾರ್ಥಿಗಳು ಭಾಗವಹಿಸಿದ್ದರು.