ದಿನಕ್ಕೆ ಎರಡು ಗಂಟೆ ಕೂಡ ಕರೆಂಟ್ ಇರೋಲ್ಲ...
ಕುಣಿಗಲ್: ದಿನಕ್ಕೆ ಕೇವಲ ಎರಡುಗಂಟೆ ಕೂಡಾ ಕರೆಂಟ್ ಇರೋಲ್ಲಾ, ಕುಡಿಯುವ ನೀರು ಪಡೆಯಲು ತೊಂದರೆಯಾಗ್ತಿದೆ, ನರೇಗ ಕಾಮಗಾರಿಗೆ ಎಂಬಿ ಬುಕ್ ಕೊಡಲು, ಅಧಿಕಾರಿ ಸೇರಿದಂತೆ ಮುಖಂಡರೊಬ್ಬರಿಗೆ ಲಂಚಕೊಡಬೇಕು. ತಾಪಂ ಕಚೇರಿಯನ್ನೆ ಮುಖಂಡರೊಬ್ಬರ ಹಿಡಿತಕ್ಕೆ ಕೊಟ್ಟು ಅಧಿಕಾರಿಗಳು ಕೈ ಕಟ್ಟಿ ಕೂತಿದ್ದಾರೆ. ಕಾಮಗಾರಿ ಕೈಗೊಳ್ಳಲು ವಿನಾಕಾರಣ ತಕರಾರು ಮಾಡ್ತಾರೆ, ಅಧಿಕಾರಿಗಳಿಗೆ ಮನವಿ ಮಾಡಿದರೆ ಸ್ಪಂದಿಸೊಲ್ಲಾ ಎಂದು ಚೌಡನಕುಪ್ಪೆ, ತಾವರೆಕೆರೆ, ಮಾದಪ್ಪನ ಹಳ್ಳಿ ವಿವಿಧ ಗ್ರಾಮಸ್ಥರು ಸಂಸದ ಡಿ.ಕೆ. ಸುರೇಶ್ ಅವರಿಗೆ ದೂರಿದರು. ಈ ಬಗ್ಗೆ ತಾಪಂ ಇಒ ಶಂಕರಪ್ಪನವರನ್ನು ತರಾಟೆಗೆ ತೆಗೆದುಕೊಂಡ ಸಂಸದ ಡಿ.ಕೆ.ಸುರೇಶ್, ಜನಪ್ರತಿನಿಧಿಗಳು ಕಾನೂನುಬದ್ಧವಾಗಿರುವುದನ್ನು ಹೇಳಿದರೆ ಕೇಳಬೇಕು, ಅದುಬಿಟ್ಟು ಎಂಬಿ ಬುಕ್ ಪಡೆಯಲು ಜನತೆಯಿಂದ ಲಂಚಕೊಡುವ ಪರಿಪಾಠ ತಾಪಂ ಕಚೇರಿಯಲ್ಲಿ ನಡೆಯುತ್ತಿದ್ದರೂ ನಿಮ್ಮ ಗಮನಕ್ಕೆ ಬಂದಿಲ್ಲವೆ, ಯಾರೋ ಜನಪ್ರತಿನಿಧಿಯ ಆಮಿಶಕ್ಕೆ ಬಲಿಯಾಗಿ ನೀವು ನಿಯಮಬಾಹಿರವಾಗಿ ಕೆಲಸ ಮಾಡಿದರೆ ಅದಕ್ಕೆ ನೀವೇ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಸಿದರು.