ಶಿಕ್ಷಣ ಕ್ರಾಂತಿಗೆ ಮಠಗಳ ಕೊಡುಗೆ ಅಪಾರ: ಬಿಎಸ್ವೈ
ಚಿಕ್ಕನಾಯಕನಹಳ್ಳಿ: ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನುಡಿದು ಮಾನವ ಜನಾಂಗದಲ್ಲಿ ಜಾಗೃತಿ ಮೂಡಲು ಕಾರಣ ವೀರಶೈವ ಮಠಾಧೀಶರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನುಡಿದರು.
ಅವರು ತಾಲೂಕಿನ ಹಂದನಕೆರೆ ಹೋಬಳಿ ಶ್ರೀಗಿರಿಸಿದ್ದೇಶ್ವರ ಕ್ಷೇತ್ರದಲ್ಲಿ 21 ಅಡಿ ಎತ್ತರದ ಶ್ರೀರೇಣುಭಗವತ್ಪಾದರ ಶಿಲಾಮೂರ್ತಿಯ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಉಂಟಾಗಿರುವ ಶಿಕ್ಷಣ ಕ್ರಾಂತಿಗೆ ವೀರಶೈವ ಮಠಗಳೇ ಕಾರಣ. ವೀರಶೈವ ಮಠಗಳು ಜಾತ್ಯತೀತ ಮನೋಭಾವದಿಂದ ಎಲ್ಲರಿಗೂ ಉಚಿತ ಶಿಕ್ಷಣ ನೀಡದಿದ್ದರೆ, ಇಂದು ನಮ್ಮ ರಾಜ್ಯ ಅನಕ್ಷರಸ್ಥರ ಬೀಡಾಗುತ್ತಿತ್ತು. ಎಲ್ಲಾ ವರ್ಗದ ಜನರನ್ನು ಒಂದು ಗೂಡಿಸಿ, ಮನುಕುಲಕ್ಕೆ ಶಾಂತಿ ತಂದುಕೊಡುವ ನಿಟ್ಟಿನಲ್ಲಿ ಮಠಾಧೀಶರು ಶ್ರಮಿಸಿದ್ದಾರೆ. ಬಲಾಢ್ಯ ಮತ್ತು ಶಕ್ತಿಯುತ ಸಮಾಜವಾಗಿದ್ದರೂ ವೀರಶೈವ ಸಮಾಜ ಬೇರೆ ದುರ್ಬಲ ವರ್ಗದವರನ್ನು ಶೋಷಣೆ ಮಾಡಿಲ್ಲ. ಇದು ನಮ್ಮ ಮಠಗಳ ಸಂಸ್ಕಾರದಿಂದ ಬಂದ ಗುಣವಾಗಿದೆ. ಇದನ್ನು ನಮ್ಮ ಸಮಾಜದ ಎಲ್ಲಾ ಜನರು ಪಾಲಿಸಬೇಕು ಎಂದರು.
ಉಗ್ರಗಾಮಿಗಳ ಹಾವಳಿ: ದೇಶದಲ್ಲಿಂದು ಉಗ್ರಗಾಮಿಗಳ ತಾಂಡವನೃತ್ಯ ವಿಪರೀತವಾಗಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ನಲ್ಲಿ ಅಭಿವೃದ್ಧಿ ಬಿರುಗಾಳಿಯನ್ನೆಬ್ಬಿಸಿದ್ದು, ಈ ನಿಟ್ಟಿನಲ್ಲಿ ದೇಶವನ್ನು ಕೊಂಡೊಯ್ಯಲು ಪಣತೊಟ್ಟಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡುವ ಮಟ್ಟಕ್ಕೆ ಭಯೋತ್ಪಾದಕರು ಬೆಳೆದಿದ್ದಾರೆ. ಪ್ರಾಮಾಣಿಕತೆಗೆ ಸಂದ ಬೆಲೆ ಇದೆಯೇ ಎಂದು ಪ್ರಶ್ನಿಸಿದರು. ಬರುವ ಲೋಕಸಭಾ ಚುನಾವಣೆ ಬಹಳ ಮಹತ್ವದ್ದಾಗಿದೆ. ಇಂದು ದೇಶ ಉಳಿಸುವ ಪರ್ವಕಾಲದಲ್ಲಿದ್ದೇವೆ ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಶ್ರೀಪ್ರಸನ್ನ ರೇಣು ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶಿಲಾಮೂರ್ತಿಯ ರೂಪದಲ್ಲಿ ಶ್ರೀರೇಣು ಭಗವತ್ಪಾದರೇ ಈ ಕ್ಷೇತ್ರದಕ್ಕೆ ಬಂದು ನೆಲೆಸಿದ್ದಾರೆಂದರೆ ತಪ್ಪಾಗಲಾರದು. ಇದು ಇತಿಹಾಸದಲ್ಲಿ ದಾಖಲೆಯಾಗುವ ಕಾರ್ಯ, ಶ್ರೀಕ್ಷೇತ್ರದ ಮಹಿಮಯಿಂದಾಗಿ ಈ ಕಾರ್ಯ ಸರಳವಾಗಿ ಮತ್ತು ಸುಲಲಿತವಾಗಿ ಕೈಗೂಡಿದೆ. ವ್ಯಕ್ತಿಯ ಗುಣಾವಗುಣಗಳನ್ನು ಆತ ತನ್ನ ಬದುಕಿನಲ್ಲಿ ಮಾಡಿದ ಸತ್ಕಾರ್ಯಗಳಿಂದ ಅಳೆಯ ಬೇಕು. ಸಿದ್ಧಾಂತಶಿಖಾಮಣಿಯಲ್ಲಿ ಹೇಳಿರುವಂತೆ
ಸ್ತ್ರೀಯರಿಗೆ ಪುರುಷ ಸಮಾನ ಪ್ರಾಧಾನ್ಯತೆ ನೀಡಬೇಕು. ಬಿ.ಎಸ್.ಯಡಿಯೂರಪ್ಪನವರು ನಾಡು ಕಂಡ ಅಪರೂಪದ ಮುಖ್ಯಮಂತ್ರಿ ಎಂದರೆ ತಪ್ಪಾಗಲಾರದು. ಅವರ ತಮ್ಮ ಆಡಳಿತಾವಧಿಯಲ್ಲಿ ಒಂದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಲಿಲ್ಲ. ಮುಂಬರುವ ದಿನಗಳಲ್ಲಿ ಅವರ ಕನಸುಗಳು ಸಾಕಾರಗೊಳ್ಳಲಿ ಎಂದು ಹಾರೈಸಿದರು.