ನಿವೃತ್ತ ಪೊಲೀಸರ ಪಿಂಚಣಿ ಪುಸ್ತಕ ಸಂಗ್ರಹ ಆಂದೋಲನ
ತುಮಕೂರು: ನಿವೃತ್ತ ಪೊಲೀಸರ ಪಿಂಚಣಿ ಪುಸ್ತಕ ಶೇಖರಣಾ ಆಂದೋಲನವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಕುಟುಂಬ (ಪತಿ,ಪತ್ನಿ) ಪಿಂಚಣಿದಾರರ ಪಿಂಚಣಿ ಪುಸ್ತಕದ ಶೇಖರಣಾ ಆಂದೋಲನದ ಬಗ್ಗೆ ಸಂಘದ ಅಧ್ಯಕ್ಷ ಮಾಲೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು. ಸಂಘದಿಂದ, ಸರ್ಕಾರದಿಂದ ಮತ್ತು ಪೊಲೀಸ್ ಇಲಾಖೆಯಿಂದ ದೊರೆಯಬಹುದಾದ ಕ್ಯಾಂಟೀನ್ ಸೌಲಭ್ಯ, ಆರೋಗ್ಯ ಭಾಗ್ಯ ಯೋಜನೆ ಮತ್ತು ವಿಧವಾ ಪಿಂಚಣಿದಾರರಿಗೂ ಶವ ಸಂಸ್ಕಾರದ ಆರ್ಥಿಕ ನೆರವಿನಂತಹ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಇದುವರೆವಿಗೂ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇರುವ ಎಲ್ಲಾ ನಿವೃತ್ತ ಪೊಲೀಸರನ್ನು ಒಗ್ಗೂಡಿಸಿ ಸದಸ್ಯರನ್ನಾಗಿ ಮಾಡಬೇಕೆಂದು ತೀರ್ಮಾನಿಸಲಾಯಿತು. ಇದೇ ವೇಳೆ ಸಂಘದ ಅಭಿವೃದ್ಧಿಗೆ ಆರ್ಥಿಕವಾಗಿ ಸಹಕರಿಸಿದ ಮೊಹಮ್ಮದ್ ಆಶಾಮ್, ವೆಂಕಟಲಕ್ಷಮ್ಮ, ಆರ್.ಸರಸ್ವತಿ, ಹೆಚ್.ಆರ್. ಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
ನಾಳೆ ವಿಶೇಷ ಸೂರ್ಯ ನಮಸ್ಕಾರ
ತುಮಕೂರು: ರಥ ಸಪ್ತಮಿ ಅಂಗವಾಗಿ ತುಮಕೂರಿನ ಹನುಮಂತಪುರದ ಯೋಗ ಮಂದಿರದಲ್ಲಿ ವಿಶೇಷ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಫೆ. 6 ರಂದು ಬೆಳಗ್ಗೆ 5-30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದಿನಿಂದಲೂ ಸೂರ್ಯೋಪಾಸನೆ ಖ್ಯಾತಿ ಹೊಂದಿದೆ. ಸೂರ್ಯ ತನ್ನ ಕಕ್ಷೆಯನ್ನು ಬದಲಿಸಿ, ಉತ್ತರಾಭಿಮುಖವಾಗಿ ಚಲಿಸುವ ಸಂದರ್ಭದಲ್ಲಿ ಪ್ರಾಕೃತಿಕವಾಗಿ ರೋಗ ನಿರೋಧಕ ವಿಶೇಷ ಕಿರಣಗಳು ಭೂಮಿಯ ಮೇಲ್ಮೆಗೆ ಪಸರಿಸುತ್ತವೆ. ಈ ಸಂದರ್ಭದಲ್ಲಿ ಮಾಡುವ ಸೂರ್ಯ ನಮಸ್ಕಾರಗಳಿಂದಾಗಿ ಆರೋಗ್ಯವೃದ್ಧಿಯಾಗಿ, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವಿಶೇಷ ಸೂರ್ಯ ನಮಸ್ಕಾರಕ್ಕೆ ಏರ್ಪಾಟು ಮಾಡಿದ್ದು, ರೋಗ ಮುಕ್ತ ದೈಹಿಕ- ಮಾನಸಿಕತೆ ಪಡೆಯುವಂತೆ ಆಸಕ್ತರಲ್ಲಿ ಮನವಿ ಮಾಡಿದೆ. ಆಸಕ್ತ ಎಲ್ಲರೂ ಈ ವಿಶೇಷ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.
'ಜಿಎಸ್ಬಿಗೆ ಟಿಕೆಟ್ ಬೇಡ'
ತುಮಕೂರು: ಹಾಲಿ ಸಂಸದ ಜಿ.ಎಸ್. ಬಸವರಾಜು ಅವರಿಗೆ ಬಿಜೆಪಿಯಿಂದ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಕೂಡದು ಎಂಬ ನಿರ್ಣಯವನ್ನು ಜಿಲ್ಲಾ ಬಿಜೆಪಿ ಘಟಕ ತೆಗೆದುಕೊಂಡಿದೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀಶ್, ಕಳೆದ ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದ ಒಂದು ವಾರದಿಂದಲೇ ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿರುವ ಜಿ.ಎಸ್. ಬಸವರಾಜು ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ವರಿಷ್ಠರಿಗೆ ಮನವಿ ಮಾಡಲಾಗಿದೆ. ಇದಕ್ಕಾಗಿ 'ಜಿಎಸ್ಬಿ ಹಠಾವೋ ಬಿಜೆಪಿ ಬಚಾವೋ' ಘೋಷಣೆ ಆರಂಭಿಸಿರುವುದಾಗಿ ಅವರು ತಿಳಿಸಿದರು. ಬಿಜೆಪಿ ಜಿಲ್ಲಾ ಘಟಕ ತುಮಕೂರಿನಿಂದ ಸೊಗಡು ಶಿವಣ್ಣ, ಎಂ.ಬಿ.ನಂದೀಶ್ ಅವರನ್ನು ಆಯ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಜಿಎಸ್ಬಿ ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ಪರವಾಗಿಲ್ಲ ಎಂದರು.
ನೀರಿಗೆ ಅಭಾವ: ಗ್ರಾಮಸ್ಥರಿಂದ ಎಂಜಿನಿಯರ್ ಕಚೇರಿ ಮುತ್ತಿಗೆ
ಗುಬ್ಬಿ: ಕಳೆದ ಒಂದೂವರೆ ವರ್ಷದಿಂದಲೂ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ತಾಲೂಕಿನ ಅಳಿಲುಘಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲರ್ದಗೆರೆ, ಗೊಲ್ಲರಹಟ್ಟಿ ಗ್ರಾಮಸ್ಥರು ಪಟ್ಟಣ ಪಂಚಾಯತ್ ಸಹಾಯಕ ಇಂಜಿನಿಯ ಎಂಜಿನಿಯರ್ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ, ಜನ ಪ್ರತಿನಿಧಿಗಳಾಗಲೀ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಮುಖಂಡರಾದ ರಾಮಣ್ಣ, ಜಯಣ್ಣ, ನಾಗರಾಜು, ಚಂದ್ರಯ್ಯ, ಲೋಕೇಶ್, ಚಿಕ್ಕಕದರಯ್ಯ, ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
7 ರಂದು ಶೈಕ್ಷಣಿಕ ಸಮ್ಮೇಳನ
ತಿಪಟೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಶಾಖೆಯಿಂದ ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಮತ್ತು ಆರ್ಟಿಇ ಕಾರ್ಯಾಗಾರವನ್ನು ಫೆ.7ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಜಿ.ಆರ್. ಜಯರಾಂ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ಒಒಡಿ ಸೌಲಭ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ವಿದ್ಯಾರ್ಥಿ ಸಮೂಹಕ್ಕೆಶಿಸ್ತು-ಸಂಯಮ ಅಗತ್ಯ'
ತಿಪಟೂರು: ವಿದ್ಯಾರ್ಥಿಗಳು ಶಿಸ್ತು-ಸಂಯಮಗಳನ್ನು ರೂಢಿಸಿಕೊಂಡು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಕೊಟ್ಟಾಗ ಮಾತ್ರ ಪರೀಕ್ಷೆ ಎಂಬ ಜೀವನದಲ್ಲಿ ಉತ್ತಮ ಅಂಕ ಪಡೆದುಕೊಳ್ಳಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಉಗ್ರನರಸಿಂಹೇಗೌಡ ತಿಳಿಸಿದರು.
ಪಟ್ಟಣದ ಕಲ್ಪತರು ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಶ್ರೀ, ಸಾಂಸ್ಕೃತಿಕ ವೇದಿಕೆ, ಎನ್ಎಸ್ಎಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲರಾದ ಎನ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೀತಾಲಕ್ಷ್ಮಿ, ಉಪನ್ಯಾಕ ಗುಂಡಪ್ಪ ಮತ್ತಿತರರಿದ್ದರು. ಉಪಪ್ರಾಂಶುಪಾಲ ಮೃತ್ಯುಂಜಯ, ಉಪನ್ಯಾಸಕರಾದ ಟಿ.ಎಸ್.ಮಹದೇವಯ್ಯ, ಎಂ.ಜಿ. ರೇಣುಕಸ್ವಾಮಿ ಉಪಸ್ಥಿತರಿದ್ದರು.
ಕು.ಗಗನ ಹಾಗೂ ಕು.ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮ ದೇವತೆ ಹುಳಿಯಾರಮ್ಮ ಜಾತ್ರೆಗೆ ಚಾಲನೆ
ಹುಳಿಯಾರು: ಪಟ್ಟಣದ ಗ್ರಾಮ ದೇವತೆ ಹುಳಿಯಾರಮ್ಮ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಹಾಗೂ ಮಧುವಣಗಿತ್ತಿ ಸೇವೆಯೊಂದಿಗೆ ಚಾಲನೆ ಪಡೆಯಿತು.
ಮಂಗಳವಾರ ಹುಳಿಯಾರು, ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯ, ಕೇಶವಾಪುರದ ಭಕ್ತರಿಂದ ಆರತಿ ಬಾನ ಸೇವೆ ನಡೆಯಿತು. ಬುಧವಾರ ರಾತ್ರಿ ಗ್ರಾಮದೇವತೆ ದುರ್ಗಾಪರಮೇಶ್ವರಿ, ಕೆಂಚಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ದೊಡ್ಡಬಿದರೆ ಕರಿಯಮ್ಮ ದೇವರ ಆಗಮನದೊಂದಿಗೆ ಕೂಡುಭೇಟಿ ಕಾರ್ಯ ನಡೆಯಲಿದೆ.
ಗುರುವಾರ ಬೆಳಗಿನ ಜಾವ 5 ಗಂಟೆಗೆ ಫಲಾಹಾರ ಸೇವೆ ನಡೆದು ನಂತರ ಪಟ್ಟದಕಳಸ ಸಮೇತ ಮೂಲಸ್ಥಾನಕ್ಕೆ ದಯಮಾಡಿ, ಪೂಜಾ ಕಾರ್ಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ರಾತ್ರಿ ಉಯ್ಯಾಲೋತ್ಸವ ಸೇವೆ, ಶುಕ್ರವಾರ ಬೆಳಿಗ್ಗೆ 9ರಿಂದ ಅರ್ಚಕ ಕೆ.ಎಸ್.ರಾಮಚಂದ್ರಭಟ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಶ್ರೀದೇವಿ ಮೂಲಮಂತ್ರ ಹೋಮ ಕಾರ್ಯ ನಡೆಯಲಿದೆ. ಶನಿವಾರ ಕಂಕಣವಿಸರ್ಜನೆ ಹಾಗೂ ಓಕಳಿ ಸೇವಾಕಾರ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇವು ಬೆಳೆ ಅಭಿವೃದ್ಧಿ ತರಬೇತಿ
ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಲಯ ಕೃಷಿ ಸಂಶೋಧನ ಕೇಂದ್ರ ವಿ.ಸಿ. ಫಾರಂ ಮಂಡ್ಯ ಮತ್ತು ತುಮಕೂರು ಹಾಲು ಒಕ್ಕೂಟ ಇವರ ಆಶ್ರಯದಲ್ಲಿ ಮೇವು ಅಭಿವೃದ್ದಿ ಹಾಗೂ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಕೆ.ಎಚ್.ಬಲರಾಮ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷರು ಹಾಗೂ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಎಂ.ಕೆ.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ, ರೈತರು ಹೈನುಗಾರಿಕೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಹಾಲು ಉತ್ಪಾದನೆ ಮಾಡಿ ಅಧಿಕ ಲಾಭಗಳಿಸಬೇಕೆಂದು ಕಿವಿಮಾತು ಹೇಳಿದರು.
ವಲಯ ಕೃಷಿ ಸಂಶೋಧನ ಕೇಂದ್ರ ವಿಜ್ಞಾನಿ ಡಾ. ಎಚ್.ಸಿ.ಲೋಹಿತಾಶ್ವ ಮಾತನಾಡಿ, ಸುಧಾರಿತ ಮೇವಿನ ತಳಿ, ಬೇಸಾಯ ಕ್ರಮ, ಅಜೋಲ ಮತ್ತು ರಸ ಮೇವು ತಯಾರಿಕೆ ಕುರಿತು ಸಂವಾದ ನಡೆಸಿದರು. ಕೃಷಿ ವಿಜ್ಞಾನಿ ಡಾ. ಶಂಕರ ಹೈನುಗಾರಿಕೆಯಲ್ಲಿ ರೈತರು ಸುಧಾರಿತ ತಾಂತ್ರಿಕತೆ ಅಳವಡಿಸಿಕೊಂಡು ಅಧಿಕ ಆದಾಯ ಪಡೆಯಬಹುದೆಂದರು.
ಡಾ.ಶಿವಪ್ಪನಾಯಕ, ಮಹಿಳೆಯರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ವ್ಯಕ್ತಿತ್ವ ವಿಕಸನ ಶಿಬಿರ
ಮಧುಗಿರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಗಮನ ಕೊಡಬೇಕಾದ ಅಗತ್ಯವಿದೆ ಎಂದು ರೋಟರಿ ಅಧ್ಯಕ್ಷ ಎಂ.ವೆಂಕಟರಾಮು ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಲಾ-ಕಾಲೇಜು ಮತ್ತು ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರ(ರೈಲಾ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಬಗ್ಗೆ ಮತ್ತು ಸಾಮಾಜಿಕ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ಅವರು ಕಿವಿಮಾತು ಹೇಳಿದರು.
ಉಪನ್ಯಾಸಕ ಎ.ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ವಿ.ಸತ್ಯನಾರಾಯಣ. ರೋಟರಿ ಪದಾಧಿಕಾರಿಗಳಾದ ಬಾಲಾಜಿ, ಜಯಚಂದ್ರ ಆರಾಧ್ಯ, ರಾಜೇಶ್ವರಿ ಸುನಿಲ್,ರಮ್ಯ ಆರಾಧ್ಯ, ಎಂ.ಶಿವಲಿಂಗಪ್ಪ, ದೈಹಿಕ ಶಿಕ್ಷಕ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. 15 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ಷರ ದಾಸೋಹ ಅಕ್ಕಿ ಅಕ್ರಮ ಸಾಗಣೆ: ಮೂವರ ವಿಚಾರಣೆ
ಪಾವಗಡ: ಅಕ್ಷರ ದಾಸೋಹದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಾರಿಯೊಂದನ್ನು ಪಾವಗಡ ಪೊಲೀಸರು ಹಿಡಿದ ಘಟನೆ ಮಂಗಳವಾರ ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸರ್ಕಾರಿ ಶಾಲೆಗಳಿಗೆ ಸರಬರಾಜು ಆಗಬೇಕಿದ್ದ ಆಕ್ಷರ ದಾಸೋಹದ ಅಕ್ಕಿಯನ್ನು ಗುತ್ತಿಗೆದಾರರು ಕಾಳ ಸಂತೆಯಲ್ಲಿ ಮಾರಾಟಕ್ಕಾಗಿ ತಾಲೂಕುನ ಬೊಮ್ಮತನಹಳ್ಳಿ ಗ್ರಾಮದಲ್ಲಿ ಲಾರಿಯಿಂದ ಆಟೋವೊಂದಕ್ಕೆ ತುಂಬುತ್ತಿದ್ದ ವೇಳೆಯಲ್ಲಿ ಸಾರ್ವಜನಿಕ ಮಾಹಿತಿ ಮೇರೆಗೆ ದಾಳಿ ಮಾಡಿದ ಪಾವಗಡ ಪೊಲೀಸರು 5ಕ್ವಿಂಟಾಲ್ ಅಕ್ಕಿಯನ್ನು ವಶ ಪಡಿಸಿಕೊಂಡಿದ್ದಾರೆ.
ಅಕ್ಕಿ ತುಂಬಿಸಿಕೊಳ್ಳುತ್ತಿದ್ದ ಆಟೋ ಪರಾರಿಯಾಗಿರುವುದಾಗಿ ತಿಳಿಸಿದ್ದು ಲಾರಿ ಸೇರಿದಂತೆ ಚಾಲಕ ಹಾಗೂ ಸಿಬ್ಬಂದಿ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶರ ಲಕ್ಷ್ಮಣ್ ನಾಯ್ಕ್ ಎಂಬುವರನ್ನು ಪಾವಗಡ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಲಾಗಿದೆ.
ಇದು ಗುತ್ತಿಗೆದಾರರ ಕಡೆಯಿಂದ ಆದ ಘಟನೆ ಎಂದು ಸಂಬಂಧಪಟ್ಟ ಬಿಇಒ ಬಿ.ಪಿ.ನಾಗರಾಜ್ ಜಾರಿಕೊಳ್ಳುತ್ತಿದ್ದು ತನಿಖೆಯಿಂದ ಸತ್ಯ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.