ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಯತ್ನ ಮಾಡದವರ ಪ್ರಲಾಪ ಸಲ್ಲ

Vishwanath S
Updated On : 5 Feb 2014, 12:10 pm

ಕ.ಪ್ರ.ವಾರ್ತೆ ,  ತುಮಕೂರು ,  ಫೆ.4
ಕೆಪಿಸಿಸಿ ಅಧ್ಯಕ್ಷರು, ಜೆಡಿಎಸ್ ಜಿಲ್ಲಾಧ್ಯಕ್ಷರ ಪಿತೂರಿಯಿಂದ ತುಮಕೂರಿಗೆ ಮೆಡಿಕಲ್ ಕಾಲೇಜಿಗೆ ತಪ್ಪಿತ್ತು ಎಂಬ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆಗೆ ಶಾಸಕ ಡಾ. ರಫೀಕ್ ಅಹಮದ್ ತಿರುಗೇಟು ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಶಾಸಕರಾಗಿ ಆಯ್ಕೆಯಾದ ಮೇಲೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತಾವನೆ ಸರಿ ಇರಲಿಲ್ಲ: ಸೊಗಡು ಶಿವಣ್ಣ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರ ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಭಾರತೀಯ ವೈದ್ಯಕೀಯ ಸಂಸ್ಥೆಗೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಪ್ರಸ್ತಾವನೆಯೇ ಸರಿಯಿಲ್ಲದ ಕಾರಣ ವಾಪಸ್ ಕಳುಹಿಸಿತ್ತು ಎಂದು ತಿರುಗೇಟು ನೀಡಿದ್ದಾರೆ.
ದಾಖಲೆ ನೀಡುವಲ್ಲಿ ವಿಫಲ: ಭಾರತೀಯ ವೈದ್ಯಕೀಯ ಸಂಸ್ಥೆ 5 ದಾಖಲೆಗಳನ್ನು ಕೇಳಿತ್ತು. ಆದರೆ ಬಿಜೆಪಿ ಸರ್ಕಾರ 5 ರಲ್ಲಿ 3 ದಾಖಲೆ ನೀಡುವಲ್ಲಿ ವಿಫಲವಾಯ್ತು. ಆ ಕಾರಣಕ್ಕಾಗಿಯೇ ತುಮಕೂರಿಗೆ ಮೆಡಿಕಲ್ ಕಾಲೇಜು ತಪ್ಪಿ ಹೋಯಿತು ಎಂದಿದ್ದಾರೆ.
ಮನವಿ ಮಾಡಿದ್ದೇವೆ: ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ತಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. 2014-15 ನೇ ಸಾಲಿಗೂ ಮೆಡಿಕಲ್ ಕಾಲೇಜು ಬರುವುದಿಲ್ಲ. ಕಾರಣ 2014-15ನೇ ಸಾಲಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಳ್ಳಬೇಕೆಂದರೆ 2013 ರಲ್ಲೇ ಪ್ರಸ್ತಾವನೆ ಕಳುಹಿಸಬೇಕಾಗಿತ್ತು. ಆದರೆ ಪ್ರಸ್ತಾವನೆ ಕಳುಹಿಸಿಲ್ಲ.  ಹಾಗಾಗಿ 2015-16ನೇ ಸಾಲಿಗೆ ತುಮಕೂರಿಗೆ ಮೆಡಿಕಲ್ ಕಾಲೇಜು ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಯತ್ನವನ್ನೇ ಮಾಡಲಿಲ್ಲ: ಸೊಗಡು ಶಿವಣ್ಣ ಅವರು 1994 ರಿಂದ 2013 ರ ತನಕ ತುಮಕೂರು ನಗರ ಶಾಸಕರಾಗಿದ್ದರು. ಈ ಅವಧಿಯಲ್ಲಿ ಅವರು ಮನಸ್ಸು ಮಾಡಿದ್ದರೆ ಮೆಡಿಕಲ್ ಕಾಲೇಜು ತರಬಹುದಿತ್ತು. ಆದರೆ ಅದಕ್ಕೆ ಪ್ರಯತ್ನವನ್ನೇ ಮಾಡಲಿಲ್ಲ. ಒಂದು ವೇಳೆ 2006 ರಲ್ಲಿ ಪ್ರಯತ್ನಿಸಿದ್ದರೆ ಇಷ್ಟೊತ್ತಿಗೆ ತುಮಕೂರಿಗೆ ಮೆಡಿಕಲ್ ಕಾಲೇಜು ಬರುತ್ತಿತ್ತು ಎಂದರು.
ತುಮಕೂರಿಗೆ ಮೆಡಿಕಲ್ ಕಾಲೇಜು ತಪ್ಪಿಸುವಲ್ಲಿ ಯಾರ ಕೈವಾಡವೂ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯವರ ಲಾಭಿ ಕೂಡ ಇಲ್ಲ. ತುಮಕೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಖಾಸಗಿಯವರಿಗೆ ಯಾವುದೇ ನಷ್ಟವೂ ಇಲ್ಲ. ಸರ್ಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳೇ ಬೇರೆ, ಖಾಸಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳೇ ಬೇರೆ ಎಂದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು: ತುಮಕೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತರಲು ಪ್ರಯತ್ನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ರಫೀಕ್ ಅಹಮದ್ ಮಾಹಿತಿ ನೀಡಿದರು.
ಹಿರಿಯರಾಗಿ ಬಂದಿದ್ದರು: ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಅವರಿಗೆ ಆಹ್ವಾನ ನೀಡಿದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಗರಸಭೆ ಕಾರ್ಯಕ್ರಮಕ್ಕೆ ಮಾತ್ರ ಬಂದಿದ್ದರು. ಅವರು ಈ ಹಿಂದೆ ಶಾಸಕರಾಗಿದ್ದರು. ಜತೆಗೆ ಹಿರಿಯರು. ಅದೊಂದೆ ಅವರು ಬಂದ ಸರ್ಕಾರಿ ಕಾರ್ಯಕ್ರಮ ಎಂದು ಸಮಜಾಯಿಷಿ ನೀಡಿದರು.
ತಾವು ಶಾಸಕರಾಗಿ ಆಯ್ಕೆಯಾಗಿ 6 ತಿಂಗಳು ಕಳೆದಿದ್ದು ಇವರೆಗೆ ತುಮಕೂರಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಇಂಗಿತ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement