ವಿದ್ಯುನ್ಮಾನ ಗುರ್ತಿನ ಚೀಟಿ ರೈತರ ನೋಂದಣಿ ಪ್ರಾರಂಭ
ಹುಳಿಯಾರು: ರಾಜ್ಯ ಸರ್ಕಾರವು ರೈತರು ಬೆಳೆದ ಬೆಳೆಗೆ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡುವ ಹಾಗೂ ಮಧ್ಯವರ್ತಿ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಕೃಷಿ ಮಾರಾಟ ನೀತಿ 2013ನ್ನು ರೂಪಿಸಿದ್ದು, ಅದರನ್ವಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ವಿದ್ಯುನ್ಮಾನ ವೇದಿಕೆ ಮೂಲಕ ನೇರವಾಗಿ ಮಾರಾಟ ಮಾಡುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ವಿದ್ಯುನ್ಮಾನ ಗುರುತಿನ ಚೀಟಿಯನ್ನು ಪಡೆಯುವಂತೆ ಹುಳಿಯಾರಿನ ಎಪಿಎಂಸಿಯ ಕಾರ್ಯದರ್ಶಿ ಎಂ. ಆರ್. ಜಯರಾಂ ಮನವಿ ಮಾಡಿದ್ದಾರೆ.
ವಿದ್ಯುನ್ಮಾನ ಗುರುತಿನ ಚೀಟಿಯ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಈ ನೀತಿಯಲ್ಲಿ ಕೊಬ್ಬರಿ ಸೇರಿದಂತೆ ಹುಳಿಯಾರು ಎಪಿಎಂಸಿ, ಚಿ.ನಾ.ಹಳ್ಳಿ ಉಪ ಮಾರುಕಟ್ಟೆ, ಹಂದನಕೆರೆ ಉಪಮಾರುಕಟ್ಟೆ ಹಾಗೂ ಉಗ್ರಾಣದಾರಿತ ಮಾರಾಟದಲ್ಲಿ ರೈತರು ಬೆಳೆದ ಯಾವುದೇ ಕೃಷಿ ಉತ್ಸನ್ನಗಳನ್ನು ವಿದ್ಯುನ್ಮಾನ ವೇದಿಕೆಯಲ್ಲಿ ಪಾರದರ್ಶಕತೆಯಿಂದ ಮಾರಾಟ ಮಾಡಬಹುದಾಗಿದೆ.ಅದಕ್ಕಾಗಿ ಮಾರಾಟ ಮಾಡುವ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ತಮ್ಮದೇ ಆದ ವಿದ್ಯುನ್ಮಾನ ತಂತ್ರಜ್ಞಾನದ ಗುರುತಿನ ಚೀಟಿಯನ್ನು ಹೊಂದುವ ಮೂಲಕ ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬಹುದಾಗಿದೆ.
ಮುಂಬರುವ ದಿನಗಳಲ್ಲಿ ರೈತರು ತಾವು ಬೆಳೆದ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗ, ಉತ್ಪನ್ನಗಳ ಆಧಾರದ ಮೇಲೆ ಸಾಲ ಪಡೆಯುವಾಗ, ಮಾರುಕಟ್ಟೆ ವರ್ತಕರಿಂದ ತೂಕ, ಹಣ ಸಂದಾಯ ಸೇರಿದಂತೆ ಇನ್ನಿತರ ಯಾವುದೇ ವ್ಯವಹಾರಗಳಲ್ಲಿ ರೈತರಿಗೆ ವಂಚನೆಯಾಗಬಾರದೆಂಬ ಸದುದ್ದೇಶದಿಂದ ಈ ನಿಯಮ ಜಾರಿಗೆ ಬಂದಿದೆ. ಇ-ಟೆಂಡರ್ ಮೂಲಕ ಕೊಬ್ಬರಿ ಖರೀದಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.