ಪುರಸಭೆ ಮುಖ್ಯಾಧಿಕಾರಿಯಿಂದಲೇ ಪ್ರತಿಭಟನೆ
ಕ.ಪ್ರ.ವಾರ್ತೆ , ಕುಣಿಗಲ್ , ಫೆ.5
ಸಕಾಲ ಯೋಜನೆಯಡಿಯಲ್ಲಿ ಸಲ್ಲಿಸಿದ್ದ ಪ್ರತಿಯನ್ನು ಪಡೆಯಲು ವ್ಯಕ್ತಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಪುರಸಭೆ ಮುಖ್ಯಾಧಿಕಾರಿ ಅವರು ಕಚೇರಿಯ ಸಿಬ್ಬಂದಿಯನ್ನು ಹೊರಗೆ ಕರೆತಂದು, ಕಾರ್ಯಾಲಯ ಬಾಗಿಲು ಮುಚ್ಚಿ ದಿಢೀರ್ ಪ್ರತಿಭಟನೆ ನಡೆಸಿ, ಅಚ್ಚರಿ ಮೂಡಿಸಿದ ಘಟನೆ ಬುಧವಾರ ನಡೆಯಿತು.
ಮಾಹಿತಿಹಕ್ಕು ಕಾರ್ಯಕರ್ತ ದಿನೇಶ್ ಕುಮಾರ್ ಎಂಬಾತ, ಪುರಸಭೆಯ ವ್ಯಾಪ್ತಿಯಲ್ಲಿನ ಖಾತೆಗೆ ಸಂಬಂಧಿಸಿದಂತೆ ಖಾತಾನಕಲು ಪ್ರತಿಪಡೆಯಲು 13-1-2014ರಲ್ಲಿ ಪುರಸಭೆಗೆ ಸಕಾಲ ಯೋಜನೆಯಡಿಯಲ್ಲಿ ಅರ್ಜಿಸಲ್ಲಿಸಿದ್ದರು. ನಿಗದಿತ ಅವಧಿ 23-1-14ಕ್ಕೆ ಅರ್ಜಿವಿಲೆಯಾಗಿರುವ ಸಂದೇಶರವಾನೆಯಾಗಿತ್ತು. ಆದರೆ ಅರ್ಜಿದಾರರಿಗೆ ತಾವು ಕೋರಿದ ಖಾತಾ ನಕಲು ಪ್ರತಿ ದೊರೆಯದ ಕಾರಣ, ಸಕಾಲ ಯೋಜನೆಯ ಸಹಾಯವಾಣಿಗೆ ಕರೆಮಾಡಿ, ಪುರಸಭೆ ಕಾರ್ಯಾಲಯದಲ್ಲಿನ ಆದ ಲೋಪದ ಬಗ್ಗೆ ದೂರುಸಲ್ಲಿಸಿ, ತಮ್ಮ ಅರ್ಜಿಗೆ ಸೂಕ್ತ ಉತ್ತರ ನೀಡುವಂತೆ ಬುಧವಾರ ಮುಖ್ಯಾಧಿಕಾರಿ ಅನ್ನದಾನಿಯವರನ್ನು ಸಂಪರ್ಕಿಸಿದಾಗ, ಮುಖ್ಯಾಧಿಕಾರಿ ಹಾಗೂ ದಿನೇಶ್‌ಕುಮಾರ್ ನಡುವೆ ವಾಗ್ವಾದ ನಡೆಯಿತು.
ಪ್ರತಿಭಟನೆ: ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮುಖ್ಯಾಧಿಕಾರಿ ಅನ್ನದಾನಿ, ಮಾಹಿತಿಹಕ್ಕು, ಸಕಾಲ ಯೋಜನೆಯ ನೆಪದಲ್ಲಿ ವಿನಾಕಾರಣ ಕಾರ್ಯಾಲಯ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನು ಹೊರಗೆ ಕರೆದು, ಕಾರ್ಯಾಲಯದ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು.
ದಿನೇಶ್‌ಕುಮಾರ್ ಅವರು ಮಾಹಿತಿಹಕ್ಕು, ಸಕಾಲ ಯೋಜನೆಯಡಿಯಲ್ಲಿ ವಿನಾಕಾರಣ ಅರ್ಜಿಹಾಕಿ ಪುರಸಭೆ ನೌಕರರಿಗೆ ಕಿರುಕುಳ ನೀಡುತ್ತಾರೆ. ಮಾಹಿತಿ ನೀಡಿದರೂ ಪಡೆಯೊಲ್ಲ, ಕೆಲ ಲೋಪದೋಷಗಳನ್ನು ಹಿಡಿದು ಬ್ಲಾಕ್ ಮೇಲ್ ಮಾಡುತ್ತಾ, ನೌಕರರನ್ನು ಹಿಂಸಿಸುತ್ತಾರೆಂದು ಆರೋಪಿಸಿದರು.
ನಾಗರಿಕರಿಗೆ ತೊಂದರೆ: ಪುರಸಭೆ ಮುಖ್ಯಾಧಿಕಾರಿಯೇ ಸಿಬ್ಬಂದಿಗಳೊಂದಿಗೆ ಹತಾಶರಾಗಿ ಪ್ರತಿಭಟನೆಗೆ ಕುಳಿತಿದ್ದರಿಂದ, ಪುರಸಭೆಗೆ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸಿದ ನಾಗರಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ನಾಗರಿಕರು, ಪುರಸಭೆ ಮಾಜಿ ಅಧ್ಯಕ್ಷ, ಹಾಲಿಸದಸ್ಯ ಕೆ.ಎಲ್. ಹರೀಶ್ ಅವರ ಗಮನಕ್ಕೆ ತಂದಮೇರೆಗೆ ಹರೀಶ್ ಸ್ಥಳಕ್ಕಾಗಮಿಸಿ ಮುಖ್ಯಾಧಿಕಾರಿಗಳಿಗೆ ಸಮಸ್ಯೆಇದ್ದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಿ. ಈ ರೀತಿ ನಿಯಮಬಾಹಿರ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೇರೆಗೆ ಮುಖ್ಯಾಧಿಕಾರಿಗಳು ದಿಢೀರ್ ಪ್ರತಿಭಟನೆ ಮೊಟಕುಗೊಳಿಸಿದರು.
ನಿಂದಿಸಿದರು: ಮುಖ್ಯಾಧಿಕಾರಿಗಳ ಆರೋಪವನ್ನು ನಿರಾಕರಿಸಿದ ಮಾಹಿತಿಹಕ್ಕು ಕಾರ್ಯಕರ್ತ ದಿನೇಶ್, ಸಕಾಲದಲ್ಲಿ ನಿಯಮಾನುಸಾರ ಕ್ರಮ ಕೈಗೊಂಡಿಲ್ಲ. ಅದನ್ನು ಕೇಳಲು ಹೋದರೆ, ಮುಖ್ಯಾಧಿಕಾರಿಗಳೇ ಸಕಾಲ ಯೋಜನೆಯನ್ನು ಅವಾಚ್ಯಶಬ್ದಗಳಿಂದ ನಿಂದಿಸಿ, ತಮ್ಮನ್ನು ನಿಂದಿಸಿದ್ದಾರೆ. ಪುರಸಭೆಯಲ್ಲಿ ಕಂದಾಯ ಜಾಗಗಳಿಗೆಲ್ಲಾ, ನಿಯಮಬಾಹಿರವಾಗಿ ಖಾತೆ ಮಾಡುತ್ತಿರುವುದು ಸೇರಿದಂತೆ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ಇವುಗಳ ಮಾಹಿತಿ ಕಲೆಹಾಕಲು ಅರ್ಜಿಸಲ್ಲಿಸಿದರೆ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಇಂತಹ ವರ್ತನೆಗೆ ಇಳಿದಿರುವುದು ನಿಜಕ್ಕೂ ಖಂಡನೀಯ ಎಂದರು.
ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಯೇ ಸಮಸ್ಯೆಯಾಗಿದ್ದು ನಾಗರಿಕರ ಅಸಮಾಧಾನಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು ಕೂಡಲೆ ಪುರಸಭೆಯಲ್ಲಿನ ಹಲವು ಅಕ್ರಮ ಖಾತೆಗಳ ಬಗ್ಗೆ ಗಮನಹರಿಸಿ ಖಾತೆ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ನಾಗರಿಕರಾದ ಕೃಷ್ಣ, ಮಂಜು, ಪ್ರಕಾಶ್ ಇತರರು ಆಗ್ರಹಿಸಿದ್ದಾರೆ.