ಸಂಸ್ಕಾರ ಹೊಂದಿರುವವನು ಉದ್ಧಾರವಾಗುತ್ತಾನೆ: ಚಂದ್ರಶೇಖರ ಮಹಾಸ್ವಾಮಿ
ಗುಬ್ಬಿ: ಕರುಣೆ, ಪ್ರೀತಿ, ಸಂಸ್ಕಾರ ಹೊಂದಿರುವವನು ಉದ್ಧಾರವಾಗುತ್ತಾನೆ. ಆತ್ಮಜ್ಞಾನವನ್ನು ಹೊಂದಿದವನು ಮರದಡಿಯಲ್ಲಿ ವಾಸಿಸಿದರೂ ಸುಖಕಾಣುತ್ತಾನೆ ಎಂದು ಬೆಟ್ಟದಹಳ್ಳಿ ಗವಿಮಠಾಧ್ಯಕ್ಷರಾದ ಚಂದ್ರಶೇಖರಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಗವಿಮಠ ಬೆಟ್ಟದಹಳ್ಳಿಯಲ್ಲಿ ನೆಡೆದ ಶ್ರೀಮಠದ ಪುನ್ರ್ ನಿರ್ಮಿತ ಶಿಲಾಕಟ್ಟಡದ ಪ್ರಾರಂಭೋತ್ಸವ ಹಾಗೂ ಶ್ರೀಸಿದ್ದರಾಮೇಶ್ವರರ 841ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಾನಿಧ್ಯ ವಹಿಸಿದ್ದ ಕನಕಪುರದ ಶ್ರೀದೇಗುಲಮಠದ ಅಧ್ಯಕ್ಷರಾದ ಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ ಹಿಂದೆ ಗೊಂಡಾರಣ್ಯವಾಗಿದ್ದ ಬೆಟ್ಟದಳ್ಳಿಯಲ್ಲಿ ಮಠವಿರಲಿಲ್ಲ. ಇಂದು ಮಠ ನಿರ್ಮಾಣವಾಗಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೂರದೂರಿಗೆ ಹೋಗಲಾರದಿದ್ದವರ ಸಲುವಾಗಿ ವಿದ್ಯಾಸಂಸ್ಥೆಗಳು ಸ್ಥಾಪನೆಯಾಗಿ, ಹಳೆಯ ಕಟ್ಟಡವನ್ನ ನವೀಕರಿಸಿ ಶಿಲಾಕಟ್ಟಡ ನಿರ್ಮಿಸಲಾಗಿದೆ ಎಂದರು. ತಿಪಟೂರಿನ ಶಿಡ್ಲೆಹಳ್ಳಿ ಮಹಾಸಂಸ್ಥಾನದ ಶ್ರೀಕರಿಬಸವ ದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು.
ಮಾಡಾಳು ಪೀಠಾಧ್ಯಕ್ಷರಾದ ಶ್ರೀರುದ್ರಮುನಿಮಹಾಸ್ವಾಮಿ, ಪಾಂಡವಮಟ್ಟಿ ವಿರಕ್ತಾಶ್ರಮದ ಗುರುಬಸವ ಮಹಾಸ್ವಾ, ಬಾಣಹಳ್ಳಿ ಶ್ರೀಗುರುಮಲ್ಲೇಶ್ವರ ಭಿಕ್ಷದ ಮಠದ ಶ್ರೀಸಿದ್ಧಲಿಂಗಸ್ವಾಮಿ, ಬೆಳ್ಳಾವಿ ಶ್ರೀಕಾರದೇಶ್ವರ ಮಠದ ಶ್ರೀಕಾರ ವೀರಬಸವ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಎಂ.ಸಿ. ಲಲಿತಾ, ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್ ಭಾಗವಹಿಸಿದ್ದರು.