ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಂಗನವಾಡಿ ಕೇಂದ್ರ ಖಾಸಗೀಕರಣದ ವಿರುದ್ಧ ಆಕ್ರೋಶ

Vishwanath S
Updated On : 7 Feb 2014, 12:56 pm

ಕುಣಿಗಲ್: ಅಂಗನವಾಡಿಯಲ್ಲಿ ಆರಾಮವಾಗಿ ಆಟವಾಡಿಕೊಂಡಿರಬೇಕಿದ್ದ ಪುಟಾಣಿಗಳು ಗುರುವಾರ ತಮ್ಮ ಪೋಷಕರೊಂದಿಗೆ ತಾಲೂಕು ಕಚೇರಿ ಆವರಣದಲ್ಲಿ ಅಂಗನವಾಡಿ ಕೇಂದ್ರಗಳ ಖಾಸಗಿಕರಣದ ವಿರುದ್ಧ ಹಿರಿಯರ ಪ್ರತಿಭಟನಾಧ್ವನಿ ಜೊತೆಗೆ ತಮ್ಮ ಧ್ವನಿಗೂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ, ತಾಲೂಕು ಕಚೇರಿ ಆವರಣದಲ್ಲಿ  ಖಾಸಗೀಕರಣದ ವಿರುದ್ಧ  ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಶಿಕಲಾ, ಎಳೆಯ ವಯಸ್ಸಿನ ಮಕ್ಕಳ, ಶಿಶು ಪೌಷ್ಟಿಕಾಂಶ ವೃದ್ಧಿಸಿ ಮಕ್ಕಳು ಬಲಿಷ್ಠರಾಗುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿಯಲ್ಲಿ (ಐಸಿಡಿಎಸ್) ಅಂಗನಾಡಿ ಕೇಂದ್ರಗಳ ಎಳೆ ವಯಸ್ಸಿನ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು, ನವಜಾತ ಶಿಶು ಮರಣ ನಿಯಂತ್ರಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದೆ. ಹಾಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಬಲವರ್ಧನೆಗೊಳಿಸುವ ನೆಪದಲ್ಲಿ ಯೋಜನೆಯನ್ನು ಐಸಿಡಿಎಸ್ ಎಂಬ ಯೋಜನೆ ಬದಲಿಗೆ ಐಸಿಡಿಎಸ್ ಮಿಷನ್ ಎಂದು ಮಾರ್ಪಾಡು ಮಾಡಿ ಅಂಗನವಾಡಿ ಕೇಂದ್ರಗಳನ್ನು ಖಾಸಗಿಕರಣ ಮಾಡುವ ಚಿಂತನೆ ನಡೆಸಿದೆ.
ಇದು ನಿಜಕ್ಕೂ ಮಾರಕವಾದ ಕ್ರಮವಾಗಿದೆ, ಹಾಲಿ ಅಂಗನವಾಡಿ ಕೇಂದ್ರಗಳು ಮತ್ತು ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವ್ಯವಸ್ಥೆ ಬಲವರ್ಧಿಸುವ ನೆಪದಲ್ಲಿ ಖಾಸಗಿಕರಣಗೊಳಿಸಿದಲ್ಲಿ ಇಡೀ ಅಂಗನವಾಡಿ ವ್ಯವಸ್ಥೆ ಬುಡಮೇಲಾಗಿ, ಎಳೆಯ ವಯಸ್ಸಿನ ಮಕ್ಕಳ ಅಪೌಷ್ಟಿಕತೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗೆ ಎಡೆಮಾಡಿಕೊಡಲಿರುವುದರಿಂದ ಸರ್ಕಾರ ಖಾಸಗಿಕರಣದ ಬಗ್ಗೆ ಚಿಂತಿಸದೆ ಇರುವ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಒತ್ತಾಯಿಸಿದರು.
ಪತ್ರಕರ್ತ ಬೀಚನಹಳ್ಳಿ ಶ್ರೀನಿವಾಸ ಮಾತನಾಡಿ, ಸರ್ಕಾರವು ಹಾಲಿ ಇರುವ ಅಂಗನವಾಡಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಚಿಂತನೆ ನಡೆಸಬೇಕಿದೆ. ಅದು ಬಿಟ್ಟು ಕೆಲ ಖಾಸಗಿಯವರ ಲಾಬಿಗೆ ಒಳಗಾಗಿ ಖಾಸಗಿಕರಣಕ್ಕೆ ಮುಂದಾದಲ್ಲಿ ಜನತೆಯಿಂದ ತೀವ್ರ ವಿರೋಧ ಎದುರಿಸುವ ಜೊತೆಯಲ್ಲಿ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಎಳೆಯ ಪುಟಾಣಿಗಳು, ತಮ್ಮ ತಾಯಂದಿರ ಘೋಷಣೆಗೆ ತಕ್ಕಂತೆ, ತಾಯಂದಿರ ಮಡಿಲಲ್ಲಿ ಕುಳಿತು ತಾವು ಕೈಗಳನ್ನು ಮೇಲೆತ್ತುವ ಮೂಲಕ ಬೆಂಬಲ ಸೂಚಿಸಿದರು. ನಂತರ ಪೋಷಕರು ತಹಸೀಲ್ದಾರ್ ಪುಟ್ಟನರಸಯ್ಯನವರಿಗೆ ಮನವಿ ಆರ್ಪಿಸಿದರು.
ಅಂಗನವಾಡಿ ಕೇಂದ್ರ ಖಾಸಗೀಕರಣ ತಡೆಗೆ ಒತ್ತಾಯ
ತುಮಕೂರು: ದೇಶದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಪ್ರಾಥಮಿಕ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೆ ಬಂದಿದ್ದ ಪಿ.ಸಿ.ಡಿ.ಎಸ್ ಯೋಜನೆಯನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ಖಂಡಿಸಿ ಸಿ.ಐಟಿ.ಯು ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಸರ್ಕಾರ ಐ.ಸಿ.ಡಿ.ಎಸ್. ಯೋಜನೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಖಾಸಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ಖಾಸಗಿ ಕಾನ್ವೆಂಟ್‌ಗಳಿಗೆ ಅಂಗನವಾಡಿ ಕೇಂದ್ರಗಳನ್ನು ವಿಲೀನಗೊಳಿಸಲು ಮುಂದಾಗಿರುವುದು ಗ್ರಾಮೀಣ ಬಡಮಕ್ಕಳ ಮತ್ತು ಗರ್ಭಿಣಿರಿಗೆ ಪೌಷ್ಟಿಕ ಆಹಾರ ಇಲ್ಲವಾಗುವುದರಿಂದ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈ ಬಿಡಬೇಕೆಂದು ಸಿಐಟಿಯು ಮುಖಂಡರು ಒತ್ತಾಯಿದ್ದಾರೆ.
ತಹಸೀಲ್ದಾರ್ ಪರವಾಗಿ ಉಪ-ತಹಸೀಲ್ದಾರ್ ವಾಸುದೇವರಾಜು ಮನವಿಯನ್ನು ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಸಿ.ಐ.ಟಿ.ಯು ತಾಲೂಕು ಅಧ್ಯಕ್ಷ ವಿಜಯಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ. ನೌಶಾದ್ ಸೆಹಗನ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಪಾರಂಪರಿಕ ಕಲ್ಲುಕುಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷೆ ಮಲ್ಲಣ್ಣ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶಾಂತಮ್ಮ ಮತ್ತು ಡಿ.ವೈಎಫ್‌ಐ ತಾಲೂಕು ಕಾರ್ಯದರ್ಶಿ ಸುರೇಂದ್ರನಾಥ್, ಮತ್ತು ಮುಖಂಡರಾದ ಗಿರಿಜಮ್ಮ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement