ಅಕ್ಷರಸ್ಥ ಅನಾಗರಿಕರ ಹೆಚ್ಚಳ
ಕ.ಪ್ರ.ವಾರ್ತೆ , ತುಮಕೂರು , ಫೆ.6
ಅಕ್ಷರಸ್ಥ ಅನಾಗರಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹಿರಿಯ ವಕೀಲ ಹಾಗೂ ಸಿರಿಗನ್ನಡ ವೇದಿಕೆ ಗೌರವ ಜಿಲ್ಲಾಧ್ಯಕ್ಷ ರವೀಂದ್ರನಾಥ ಠಾಗೂರ್ ವಿಷಾದಿಸಿದರು.
ಅವರು ತುಮಕೂರಿನಲ್ಲಿ ನಡೆದ ತುರುವೇಕೆರೆ ಪಪೂ ಕಾಲೇಜಿನ ಇಂಗ್ಲಿಷ್ ಶಿಕ್ಷಕ ಚಂದ್ರಶೇಖರ್ ರಚಿಸಿರುವ ಇಂಗ್ಲಿಷ್ ಕಲಿಕೆ ಹಾಗೂ ಬೋಧನೆಗೆ ಸುಲಭ ಕೈಪಿಡಿ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಸರ್ಕಾರಗಳು ಕೇವಲ ಅಕ್ಷರ ಕಲಿಕೆಗೆ ಒತ್ತು ನೀಡಿವೆಯೇ ವಿನಃ ವಿವೇಕ ಮೂಡಿಸುವ, ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ. ಇದೊಂದು ದುರಂತದ ಸಂಗತಿ. ಸಮಾಜಮುಖಿ ಅಕ್ಷರಸ್ಥರ ಸಂಖ್ಯೆ ಹಿಂದೆಂದಿಗಿಂತಲೂ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ. ಇಂತಹ ಸಂದರ್ಭದಲ್ಲಿ ಕೆಳಸ್ಥರದಿಂದ ಬಂದ ಅಧ್ಯಾಪಕ, ಲೇಖಕ ಚಂದ್ರಶೇಖರ್ ಉತ್ತಮವಾಗಿ ಕಾರ್ಯ ನಿರ್ವಹಿಸಿ, ತಾವು ಮೇಲಿನ ವರ್ಗಕ್ಕೆ ಸೇರಿಲ್ಲ ಎಂಬುದನ್ನು ಸಾಬೀತುಪಡಿಸಿರುವುದು ಸಂತೋಷದ ವಿಷಯ ಎಂದು ಠಾಗೂರ್ ಶ್ಲಾಘಿಸಿದರು.
ಕೊಳ್ಳುಬಾಕ ಸಂಸ್ಕೃತಿಯ, ಆಸ್ತಿ ಗಳಿಸುವ, ಕಬಳಿಸುವ ಇಂದಿನ ಏರು ದಿನಗಳಲ್ಲಿ ಜ್ಞಾನ ಹಂಚುವ ಕೆಲಸಕ್ಕೆ ಕೈ ಹಾಕಿರುವ ಚಂದ್ರಶೇಖರ್ ಅವರ ಈ ಕೃತಿ ಬಹುಪಯೋಗಿಯಾಗಿದೆ. ಶಿಕ್ಷಕರ, ವಿದ್ಯಾರ್ಥಿಗಳ, ಜನಸಾಮಾನ್ಯರ ಪ್ರೋತ್ಸಾಹ ಕೃತಿಗೆ ಬೇಕಾಗಿದೆ. ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕ ಕೊಂಡು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕಾಗಿದೆ. ಇಂಗ್ಲಿಷ್ ಭಾಷಾ ಕಲಿಕೆಗೆ ಉಪಯುಕ್ತವಾಗಿರುವ ಈ ಕೃತಿಗೆ ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ರೀತಿಯ ಬೆಂಬಲ ನೀಡುವಂತಾಗಲಿ ಎಂದು ಠಾಗೂರ್ ಆಶಿಸಿದರು.
ವಿಕಾಸವಾಗುತ್ತಿದ್ದಾರೆಯೇ: ವ್ಯಕ್ತಿ ವಿಕಾಸಬೇಕು. ವಿಕೃತವಾಗಬಾರದು. ಹೀಗಾದಾಗ ಜನೋಪಯಾಗಿ ಚಿಂತನೆ ಬರಲು ಸಾಧ್ಯ. ಶಿಕ್ಷಕರು ವಿಕಾಸವಾದಲ್ಲಿ ಸಮಾಜ ವಿಕಾಸವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಶಿಕ್ಷಕರು ವಿಕಾಸವಾಗುತ್ತಿದ್ದಾರೆಯೇ, ಹೆಚ್ಚಿನ ರೀತಿಯಲ್ಲಿ ಅಧ್ಯಯನಶೀಲರಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಉತ್ತರ ಸಮರ್ಪಕವಾಗಿ ಸಿಗುತ್ತಿಲ್ಲ. ಇದು ಸಮಾಜದ ಆತಂಕಕ್ಕೆ ಕಾರಣವಾಗಿದೆ ಎಂದು ಠಾಗೂರ್ ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆ ಮಾಡಿದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ತಾವು ಚಂದ್ರಶೇಖರ್ ಅವಕ ಕೃತಿಗೆ ಆಶಯ ನುಡಿ ಬರೆದಿದ್ದು, ಕೃತಿ ಉತ್ತಮವಾಗಿ ಮೂಡಿ ಬಂದಿದೆ ಎಂದು ಶ್ಲಾಘಿಸಿದರು.
ದಾಖಲಾಗಿಲ್ಲ: ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುವುದರಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂಬುದಕ್ಕೆ ಚಂದ್ರಶೇಖರ್ ಸಾಕ್ಷಿಯಾಗಿದ್ದಾರೆ. ಇದೊಂದು ಕಾಣದ ಕ್ರಾಂತಿಯೇ ಸರಿ. ಹಿಂದೆ ವಿವಿಧ ಕ್ರಾಂತಿಗಳು ನಡೆದಿವೆ. ಅವೆಲ್ಲಾ ದಾಖಲಾಗಿವೆ. ಆದರೆ ಹಲವು ಸೇವೆಗಳು ದಾಖಲಾಗಿಲ್ಲ. ಪ್ರಶಸ್ತಿ ಪಡೆದಿಲ್ಲ. ವಿವಿಧ ಸ್ಥರಗಳಲ್ಲಿ ಸದ್ದಿಲ್ಲದೆ ಸೇವೆ ಮಾಡುವ ಮಂದಿಯನ್ನು ಗುರುತಿಸುವ ಕೆಲಸ ಇಂದಿನ ತುರ್ತು ಎಂದು ನಾರಾಯಣಸ್ವಾಮಿ ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂಎಲ್‌ಸಿ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ತಾವು ಅಸಂಖ್ಯ ವೈದ್ಯಕೀಯ ಚಿಕಿತ್ಸೆ ನಡೆಸಿದ್ದು, ಕಾರ್ಯಭಾರದ ಒತ್ತಡದಿಂದ ಅವೆಲ್ಲವನ್ನು ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ಚಂದ್ರಶೇಖರ್ ಅವರ ಕಾರ್ಯವೈಖರಿಯಿಂದ ತಮಗೆ ಸಂತೋಷವಾಗಿದ್ದು, ಅವರು ಇದೇ ರೀತಿ ಇನ್ನಷ್ಟು ಕೃತಿಗಳನ್ನು ಹೊರ ತರುವಂತಾಗಲಿ. ಜಾಗತಿಕ ಭಾಷೆಯೊಂದನ್ನು ಕನ್ನಡಿಗರು ಸುಲಭವಾಗಿ ಕಲಿಯಲು ಕೃತಿ ಮೂಲಕ ಸಹಕರಿಸಿರುವ ಅವರ ಕೆಲಸ ಪ್ರಶಂಸಾರ್ಹ ಎಂದರು.
ಅಧ್ಯಾಪಕ, ಲೇಖಕ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ತಾವು ರಚಿಸಿರುವ ಇಂಗ್ಲಿಷ್ ಕಲಿಕೆ, ಬೋಧನೆ ಕೈಪಿಡಿ ಎಲ್ಲ ವರ್ಗದವರಿಗೂ ಉಪಯುಕ್ತವಾಗಿದ್ದು, ಉಪಯೋಗ ಪಡೆಯುವಂತಾಗಲಿ ಎಂದರು. ಪ್ರೊ. ಚಿಕ್ಕಣ್ಣ ಎಣ್ಣೆಕಟ್ಟೆ ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಸಿ.ಎನ್. ಶ್ರೀನಾಥ್, ಪ್ರೊ. ಎಸ್.ವಿ. ಮೋಹನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಗಳಾಗಿ ಪಾವಗಡದ ವಕೀಲ ಎಂ. ನಾಗೇಂದ್ರಪ್ಪ, ಚನ್ನಮಲ್ಲಪ್ಪ, ಗುಬ್ಬಿಯ ಪ್ರಗತಿಪರ ರೈತ ಬಿ.ಜಿ. ವಗ್ಗಪ್ಪ ಉಪಸ್ಥಿತರಿದ್ದರು.