ಎಸ್.ಎಂ.ಹಳ್ಳಿಗೆ ಕೂಡಲೇ ಕಾವೇರಿ ನೀರು ಪೂರೈಕೆ ಮಾಡಿ
ಚನ್ನಪಟ್ಟಣ: ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಎಸ್.ಎಂ.ಹಳ್ಳಿ ಗ್ರಾಮಕ್ಕೆ ಕೂಡಲೇ ಕಾವೇರಿ ನೀರು ಪೂರೈಕೆ ಮಾಡವಂತೆ ನಗರ ನೀರು ಸರಬರಾಜು ಮಂಡಲಿ ಎಂಜಿನಿಯರ್ ಮತ್ತು ತಾ.ಪಂ ಇಒಗೆ ಶಾಸಕ ಸಿ.ಪಿ.ಯೋಗೇಶ್ವರ್ ತಾಕೀತು ಮಾಡಿದರು.
ಬುಧವಾರ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿದ ಯೋಗೇಶ್ವರ್, ಕಳೆದ ಮೂರು ವರ್ಷದಿಂದ ಗ್ರಾಮದಲ್ಲಿ ತಾಂಡವ ವಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ವಿಫಲ ಗೊಂಡಿದೆ ಎಂದು ಕಿಡಿಕಾರಿದರು.
ಕಾವೇರಿ ನೀರು ತಾತ್ಕಾಲಿಕ ಪರಿಹಾರ ವಾಗಿದ್ದು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಲು ಶ್ರಮಿಸಬೇಕೆಂದು ತಿಳಿಸಿದ ಅವರ 2ಕಿ.ಮೀ. ದೂರದಲ್ಲಾದರೂ ಕೊಳವೆ ಬಾವಿ ಕೊರೆದು ನೀರು ತನ್ನಿ ಎಂದು ಆದೇಶಿಸಿದರು.
ಹೊಂಗನೂರು ಗ್ರಾಮಸ್ಥರೊಂದಿಗೆ ಚರ್ಚೆ: ಎಸ್.ಎಂ.ಹಳ್ಳಿ ಗ್ರಾಮಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರದ ಮಟ್ಟದಲ್ಲಿ ಅನುಮತಿ ದೊರೆಯ ಬೇಕಿದ್ದು ಹಿಂದೆ ನಾನು ಸಚಿವನಾಗಿದ್ದಾಗ ಹೊಂಗನೂರು ಗ್ರಾಮಕ್ಕೆ ಕೊಡಿಸಿದ್ದೇನೆ. ಹೊಸದಾಗಿ ನಿಮ್ಮಗ್ರಾಮಕ್ಕೆ ಸಂಪರ್ಕ ನೀಡಲು ಸಾಧ್ಯವಿಲ್ಲದಿದ್ದು ಹೊಂಗನೂರು ಗ್ರಾಮದಿಂದ ಎಸ್.ಎಂ. ಹಳ್ಳಿಗೆ ಸಂಪರ್ಕ ನೀಡುವುದಾಗಿ ತಿಳಿಸಿದ ಶಾಸಕರು ಈ ಸಂಬಂಧ ಸದಸ್ಯರು ಮತ್ತು ಗ್ರಾಮದ ಪ್ರಮುಖರೊಂದಿಗೆ ಮಾತನಾಡಿದ್ದು ಅವರು ಕಾಮಗಾರಿಗೆ ಅಡ್ಡಿ ಪಡಿಸಿದ್ದೇ ಆದಲ್ಲಿ ಪೊಲೀಸರ ಸಹಾಯದಿಂದ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಇತರ ಗ್ರಾಮಗಳಿಗೂ ಸಂಪರ್ಕ ನೀಡಿ: ತಾಲೂಕಿನ ನೀಲಕಂಠನಹಳ್ಳಿ, ಮಸೀಗೌಡನ ದೊಡ್ಡಿ, ಅಪ್ಪಗೆರೆ ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ತೀವ್ರ ಗೊಂಡಿದ್ದು ಈ ಗ್ರಾಮಗಳಿಗೂ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
57 ಲಕ್ಷ ಬಾಕಿ ಬರಬೇಕು: ಕಳೆದ ಬೇಸಿಗೆಯಲ್ಲಿ ತಾಲೂಕಿನ ಕೆಲ ಗ್ರಾಮಗಳಿಗೆ ಕಾವೇರಿ ನೀರು ಸರಬರಾಜು ಮಂಡಲಿ ಸಂಪರ್ಕ ನೀಡದ್ದು, ಈ ಗ್ರಾ.ಪಂ ಗಳಿಂದ ನಮ್ಮ ಮಂಡಲಿಗೆ 57 ಲಕ್ಷ ಞ್ಜ. ಹಣ ಬಾಕಿ ಬರಬೇಕಿದೆ ಎಂದು ಮಂಡಲಿಯ ಎಂಜಿನಿಯರ್ ಪಾಷಾ ತಿಳಿಸಿದರು.
ಕಾವೇರಿ ನೀರನ್ನು ಪಟ್ಟಣ ಪ್ರದೇಶಕ್ಕೆ ಪೂರೈಕೆ ಮಾಡುವುದೇ ನಮಗೆ ಸವಾಲಿನ ಕೆಲಸ ಎನಿಸಿದೆ. ಅಂತಹುದರಲ್ಲಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಸಂಪರ್ಕ ಕಲ್ಪಿಸಿದರೆ ಪಟ್ಟಣದ ಹೊರವಲಯಗಳಿಗೆ ಸಂಪರ್ಕ ಕಲ್ಪಿಸುವುದು ಕಷ್ಟಸಾಧ್ಯವಾಗುತ್ತದೆ ಎಂದು ತಿಳಿಸಿದರು.
25 ಲಕ್ಷಕ್ಕೆ ಕ್ರಿಯಾ ಯೋಜನೆ: ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ 25ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು ಈ ಮೊತ್ತಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವುದಾಗಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಪವಿತ್ರಾ, ಹೊಂಗನೂರು ತಾ.ಪಂ.ಸದಸ್ಯೆ ಪವಿತ್ರಾ, ಕಾರ್ಯನಿರ್ವಹಣಾಧಿಕಾರಿ ಜಯರಂಗ, ತಹಸೀಲ್ದಾರ್ ಶಿವರುದ್ರಯ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು.