ಯುವಜನತೆ ಮಾದಕ ವಸ್ತುಗಳಿಂದ ದೂರವಿರಲಿ
ತುಮಕೂರು: ದೇಶದ ಬೆನ್ನೆಲುಬಾಗಿರುವ ಯುವಜನತೆ ಮದ್ಯ ಹಾಗೂ ಮಾದಕ ವಸ್ತುಗಳಿಂದ ದೂರವಿರುವುದು ಉತ್ತಮ. ಒಮ್ಮೆ ಈ ದುಶ್ಟಟಗಳಿಗೆ ದಾಸರಾದಲ್ಲಿ ಅನೇಕ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಕರೆ ನೀಡಿದರು.
ಬೆಂಗಳೂರು ಮದ್ಯಪಾನ ಸಂಯಮ ಮಂಡಳಿ, ಮಕ್ಕಳ ರಕ್ಷಣಾ ಘಟಕ ತುಮಕೂರು, ಅಚರ್ಡ್ ಮದ್ಯವರ್ಜನ ಕೇಂದ್ರ, ವೀರಭದ್ರ ಹಾಗೂ ರಾಘವೇಂದ್ರ ಐಟಿಐ ವಿದ್ಯಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಅಚರ್ಡ್
ಮದ್ಯವರ್ಜನ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಸಹವಾಸ ದೋಷದಿಂದ ಯುವಜನಾಂಗ ಕುಡಿತ ಹಾಗೂ ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಕುಡಿಯುವುದರಿಂದ ದುಃಖ ದೂರವಾಗುತ್ತದೆ ಎಂಬುದು ಕೇವಲ ಭ್ರಮೆ, ಕುಡಿಯುವುದರಿಂದ ನಮ್ಮ ವೇದನೆ ತಾತ್ಕಾಲಿಕವಾಗಿ ಶಮನಗೊಳ್ಳುತ್ತದೆಯೇ ಹೊರತು ಶಾಶ್ವತವಾಗಿ ಅಲ್ಲ ಎಂದು ಅವರು ತಿಳಿಸಿದರು.
ಚಟಕ್ಕೆ ಬೀಳದಿರಿ: ಅಚರ್ಡ್ ಸಂಸ್ಥೆಯ ಸಮಾಲೋಚಕ ಮುತ್ತುರಾಯಪ್ಪ ಉಪನ್ಯಾಸ ನೀಡುತ್ತಾ ಒತ್ತಡ ಮತ್ತು ದೈಹಿಕ ಶ್ರಮವನ್ನು ದೂರಮಾಡಲು ಮದ್ಯಪಾನ ಹಾಗೂ ಮಾದಕ ವಸ್ತುಗಳ ಚಟಕ್ಕೆ ಯುವಜನಾಂಗ ಬೀಳಬಾರದು ಎಂದರು. ಮದ್ಯಪಾನ ಕೇಂದ್ರೀಯ ನರಮಂಡಲದ ಮೇಲೆಯೇ ಪರಿಣಾಮ ಬೀರುತ್ತಾ ಹೋಗುತ್ತದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತವೆ. ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತದೆ. ಒಮ್ಮೆ ದಾಸರಾದರೆ ಪದವಿ, ಕೌಶಲ್ಯ ನಾಶವಾಗುತ್ತದೆ ಎಂದು ತಿಳಿಸಿದರು. ಅಚರ್ಡ್ ಸಂಸ್ಥೆ ನಿರ್ವಾಹಕ ನಿರ್ದೇಶಕ ಡಾ. ಸದಾಶಿವಯ್ಯ ಅವರು ಮಾತನಾಡಿ, ಮದ್ಯ ಹಾಗೂ ಮಾದಕ ವಸ್ತುಗಳು ಮಾನವನನ್ನು ಮಸಣಕ್ಕೆ ಕರೆದುಕೊಂಡು ಹೋಗುವ ದಾರಿ ಇದ್ದ ಹಾಗೆ. ಒಬ್ಬ ವ್ಯಕ್ತಿ ಈ ವ್ಯಸನಕ್ಕೆ ದಾಸನಾದಲ್ಲಿ ನಂತರದ ದಿನಗಳಲ್ಲಿ ಕುಡಿತದ ಚಟ ಆತನ ಕುಟುಂಬದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇದೊಂದು ಮಾಯಾಜಾಲವಿದ್ದ ಹಾಗೆ. ಯುವಜನಾಂಗ ಈ ಮಾಯಾಜಾಲದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಪರಿಣಾಮ: ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸಾ.ಚಿ. ರಾಜಕುಮಾರ್ ಮಾತನಾಡಿ, ಮಾದಕ ವಸ್ತುಗಳ ಮತ್ತು ಮದ್ಯಪಾನ ಸೇವನೆ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.